NationalPolitics

ವಿಶೇಷ ಸ್ಥಾನಮಾನ ಅಂದ್ರೆ ಏನು, ಅದರಿಂದ ಏನು ಪ್ರಯೋಜನ..?; ಆಂಧ್ರ, ಬಿಹಾರಗಳು ಈ ಸ್ಥಾನಮಾನ ಕೇಳ್ತಿರೋದೇಕೆ..?

ಕೇಂದ್ರದಲ್ಲಿ ಬಿಜೆಪಿ ಸರಳ ಬಹುಮತ ಪಡೆಯದಿದ್ದರೂ, ಮಿತ್ರಪಕ್ಷಗಳ ನೆರವಿನಿಂದ ಮೂರನೇ ಬಾರಿಗೆ ಎನ್‌ಡಿಎ ಸರ್ಕಾರಕ್ಕೆ ಅಸ್ತಿತ್ವಕ್ಕೆ ಬರುತ್ತಿದೆ.. ಇದರಲ್ಲಿ ಟಿಡಿಪಿಯ ಚಂದ್ರಬಾಬು ನಾಯ್ಡು ಹಾಗೂ ಜೆಡಿಯುನ ನಿತೀಶ್‌ ಕುಮಾರ್‌ ಕಿಂಗ್‌ ಮೇಕರ್‌ಗಳಾಗಿದ್ದಾರೆ.. ಇವರ ಬೆಂಬಲವಿಲ್ಲದೆ ಸರ್ಕಾರ ರಚನೆ ಮಾಡೋದಕ್ಕೆ ಆಗೋದಿಲ್ಲ.. ಈ ಕಾರಣಕ್ಕಾಗಿಯೇ ಇವರು ಹಲವಾರು ಬೇಡಿಕೆಗಳನ್ನಿಟ್ಟಿದ್ದಾರೆ.. ಅದರಲ್ಲಿ ಪ್ರಮುಖವಾದುದು ತಮ್ಮ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಬೇಕು ಅನ್ನೋದು.. ಹಾಗಾದರೆ ವಿಶೇಷ ಸ್ಥಾನಮಾನ ಅಂದ್ರೆ ಏನು..? ಅದನ್ನು ಯಾಕೆ ನೀಡ್ತಾರೆ..? ಅದರಿಂದ ರಾಜ್ಯಗಳಿಗೆ ಏನು ಪ್ರಯೋಜನ ಅನ್ನೋದನ್ನು ನೋಡೋಣ..

2014 ರಲ್ಲಿ, ಆಖಂಡ ಆಂಧ್ರಪ್ರದೇಶ ರಾಜ್ಯ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಾಗಿ ವಿಭಜನೆಯಾಯಿತು.. ತೆಲಂಗಾಣಕ್ಕಾಗಿ ಹಲವು ದಶಕಗಳಿಂದ ಹೋರಾಟ ನಡೆಸುತ್ತಿದ್ದರಿಂದ ಅದನ್ನು ಪರಿಗಣಿಸಿ ಅಂದಿನ ಮನಮೋಹನ್‌ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಆಂಧ್ರಪ್ರದೇಶ ಪುನರ್ವಿಭಜನಾ ಕಾಯಿದೆ 2014 ಅನ್ನು ಜಾರಿಗೆ ತಂದಿತ್ತು.. ಈ ಕಾಯ್ದೆಯಲ್ಲಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದು ಉಲ್ಲೇಖಿಸಲಾಗಿದೆ. ಅನಂತರ ಬಂದ ಬಿಜೆಪಿ ಸರ್ಕಾರ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಘೋಷಣೆ ಮಾಡಿಲ್ಲ.. ಇನ್ನು 2014ರಲ್ಲಿ ವಿಭಜಿತ ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ ಅಧಿಕಾರಕ್ಕೆ ಬಂದಿತ್ತು.. ಈ ಬೇಳೆ ಎನ್‌ಡಿಎ ಜೊತೆಗಿದ್ದ ತೆಲುಗುದೇಶಂ ಪಾರ್ಟಿ, ವಿಶೇಷ ಸ್ಥಾನಮಾನ ನೀಡದಿದ್ದಕ್ಕಾಗಿ ಎನ್‌ಡಿಎನಿಂದ ಹೊರಬಂದಿತ್ತು..

ಅಖಂಡ ಆಂಧ್ರಪ್ರದೇಶದಲ್ಲಿ ಹೈದರಾಬಾದ್‌ ರಾಜಧಾನಿಯಾಗಿತ್ತು.. ವಿಭಜನೆಯಾದ ಮೇಲೆ ಹೈದರಾಬಾದ್‌ ತೆಲಂಗಾಣದ ತೆಕ್ಕೆಗೆ ಹೋಯಿತು.. ಹೀಗಾಗಿ ಆಂಧ್ರಪ್ರದೇಶಕ್ಕೆ ಹೊಸ ರಾಜಧಾನಿ ಕಟ್ಟಬೇಕಾದ ಅನಿವಾರ್ಯತೆ ಇದೆ.. ಇದರ ಜೊತೆಗೆ ಹೊಸದಾಗಿ ಆಡಳಿತ ವರ್ಗ, ಮೂಲ ಸೌಕರ್ಯಗಳನ್ನು ಮಾಡಬೇಕಾದ ಅವಶ್ಯಕತೆ ಇದೆ.. ಹೊಸ ರಾಜ್ಯಕ್ಕೆ ಆದಾಯ ಬರುವುದಕ್ಕಾಗಿ ಕೈಗಾರಿಕಾ ವಲಯಗಳನ್ನು ಸ್ಥಾಪಿಸಬೇಕಾಗಿದೆ.. ಈ ಕಾರಣಕ್ಕಾಗಿಯೇ 13 ಜಿಲ್ಲೆಗಳನ್ನೊಳಗೊಂಡ ವಿಭಜಿತ ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರಾಜ್ಯಸಭೆಯಲ್ಲಿ ಘೋಷಿಸಿದ್ದರು. ಕೇಂದ್ರ ಸಚಿವ ಸಂಪುಟವೂ ಒಪ್ಪಿಗೆ ನೀಡಿದೆ. ಆದರೆ, ಆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಈ ವಿಶೇಷ ಸ್ಥಾನಮಾನವನ್ನು ಇದುವರೆಗೂ ಜಾರಿಗೊಳಿಸಿಲ್ಲ.. ಈಗ ಕೇಂದ್ರ ಸರ್ಕಾರದ ಅಳಿವು ಉಳಿವಿನ ಶಕ್ತಿ ಚಂದ್ರಬಾಬು ನಾಯ್ಡು ಹಾಗೂ ನಿತೀಶ್‌ ಕುಮಾರ್‌ ಕೈಯಲ್ಲಿದೆ.. ಹೀಗಾಗಿ, ಕೇಂದ್ರದ ಜೊತೆ ಒತ್ತಡ ಹೇರಿ ಆಂಧ್ರಕ್ಕೆ ವಿಶೇಷ ಸ್ಥಾನಮಾನ ಪಡೆಯುವ ಸಾಧ್ಯತೆ ಇದೆ.. ಇನ್ನು ಬಿಹಾರಕ್ಕೂ ನಿತೀಶ್‌ ಕುಮಾರ್‌ ಅವರು ವಿಶೇಷ ಸ್ಥಾನಮಾನ ಕೇಳುತ್ತಿದ್ದಾರೆ.. ಅದೂ ಕೂಡಾ ಈ ಬಾರಿ ಕೈಗೂಡುವ ಸಾಧ್ಯತೆ ಇದೆ..

ವಿಶೇಷ ಸ್ಥಾನಮಾನ ಯಾವಾಗಿಂದ ಶುರುವಾಯಿತು..?
5 ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಅನುಸರಿಸಿ, ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವ ವ್ಯವಸ್ಥೆಯನ್ನು 1969 ರಲ್ಲಿ ಪರಿಚಯಿಸಲಾಯಿತು. ಆರಂಭದಲ್ಲಿ ಅಸ್ಸಾಂ, ನಾಗಾಲ್ಯಾಂಡ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಮಾತ್ರ ಈ ವಿಶೇಷ ಸ್ಥಾನಮಾನವನ್ನು ಹೊಂದಿದ್ದವು. ನಂತರ ವಿವಿಧ ರಾಜ್ಯಗಳಿಂದ ಬಂದ ಬೇಡಿಕೆಗಳು ಮತ್ತು ಅಲ್ಲಿನ ಪರಿಸ್ಥಿತಿಗಳಿಂದಾಗಿ ಇನ್ನೂ ಎಂಟು ರಾಜ್ಯಗಳಿಗೆ ಈ ವಿಶೇಷ ಸ್ಥಾನಮಾನ ನೀಡಲಾಯಿತು. ಪ್ರಸ್ತುತ ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ಸಿಕ್ಕಿಂ, ತ್ರಿಪುರಾ ಮತ್ತು ಉತ್ತರಾಖಂಡ ರಾಜ್ಯಗಳಿಗೂ ವಿಶೇಷ ಸ್ಥಾನಮಾನವಿದೆ.

ಪ್ರಸ್ತುತ ದೇಶದ 11 ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಇತ್ತೀಚೆಗೆ, ಆಂದ್ರಪ್ರದೇಶದ ಜೊತೆಗೆ ಬಿಹಾರ, ಛತ್ತೀಸ್‌ಗಢ, ಒಡಿಶಾ ಮತ್ತು ರಾಜಸ್ಥಾನ ರಾಜ್ಯಗಳು ಕೂಡ ವಿಶೇಷ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಿವೆ. ಈ ಹಿನ್ನೆಲೆಯಲ್ಲಿ 2013ರಲ್ಲಿ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನದ ಕುರಿತು ಅಧ್ಯಯನ ನಡೆಸಲು ರಿಸರ್ವ್ ಬ್ಯಾಂಕ್‌ನ ಅಂದಿನ ಗವರ್ನರ್ ರಘುರಾಮ್ ರಾಜನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು.

ವಿಶೇಷ ಸ್ಥಾನಮಾನ ನೀಡಬೇಕಾದರೆ ಯಾವುದನ್ನು ಪರಿಗಣಿಸಲಾಗುತ್ತೆ..?
ಒಂದು ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಹಲವಾರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನಾವು ಪಟ್ಟಿ ಮಾಡಿದ್ದೇವೆ..

ಪರ್ವತ ಪ್ರದೇಶಗಳು ಮತ್ತು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಪ್ರದೇಶಗಳಾಗಿರಬೇಕು
ಜನಸಾಂದ್ರತೆ ಕಡಿಮೆ ಇರಬೇಕು, ಬುಡಕಟ್ಟು ಜನಾಂಗಗಳು ಹೆಚ್ಚಿನ ಪ್ರಮಾಣದಲ್ಲಿರಬೇಕು
ಸರಿಯಾದ ಮೂಲಸೌಕರ್ಯ ಇಲ್ಲದ ಪ್ರದೇಶಗಳಾಗಿರಬೇಕು
ಆರ್ಥಿಕ ಸಂಪನ್ಮೂಲಗಳಿದ್ದರೂ ಆರ್ಥಿಕವಾಗಿ ದುರ್ಬಲವಾಗಿರುವ ಪ್ರದೇಶವಾಗಿರಬೇಕು
ವಿದೇಶಗಳ ಗಡಿಯಲ್ಲಿ ಆಯಕಟ್ಟಿನ ಪ್ರಮುಖ ರಾಜ್ಯಗಳಾಗಿರಬೇಕು

ವಿಶೇಷ ಸ್ಥಾನಮಾನ ನೀಡುವ ಅಧಿಕಾರ ಯಾರಿಗಿದೆ..?

ಪ್ರಧಾನಮಂತ್ರಿ, ಕೇಂದ್ರ ಸಚಿವರು, ರಾಜ್ಯ ಮುಖ್ಯಮಂತ್ರಿಗಳು ಮತ್ತು ಯೋಜನಾ ಆಯೋಗದ ಅಧ್ಯಕ್ಷತೆಯ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ವಿಶೇಷ ಸ್ಥಾನಮಾನದ ಬಗ್ಗೆ ನಿರ್ಧರಿಸುತ್ತಿತ್ತು. ಆದರೆ, ಇತ್ತೀಚೆಗೆ ಎನ್‌ಡಿಎ ಸರ್ಕಾರ ಯೋಜನಾ ಆಯೋಗದ ಬದಲಿಗೆ ಹೊಸ ನೀತಿ ಆಯೋಗವನ್ನು ಸ್ಥಾಪಿಸಿದೆ. ವಿಶೇಷ ಸ್ಥಾನಮಾನವು ಹಣ ಹಂಚಿಕೆಗೆ ಸಂಬಂಧಿಸಿರುವುದರಿಂದ ಕೇಂದ್ರ ಹಣಕಾಸು ಆಯೋಗದ ನಿರ್ಧಾರವೂ ನಿರ್ಣಾಯಕವಾಗುತ್ತದೆ.

 ವಿಶೇಷ ಸ್ಥಾನಮಾನ ಪಡೆಯುವುದರಿಂದ ರಾಜ್ಯಗಳಿಗೆ ಏನು ಅನುಕೂಲ..?
ವಿಶೇಷ ಸ್ಥಾನಮಾನ ಪಡೆದ ರಾಜ್ಯಕ್ಕೆ ಉತ್ತಮ ಸೌಲಭ್ಯ ಕಲ್ಪಿಸಲು ಕೇಂದ್ರವು ಅನುದಾನದ ರೂಪದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುತ್ತದೆ.. ಸಾಮಾನ್ಯವಾಗಿ ರಾಜ್ಯಗಳಿಗೆ ನೀಡುವ ಅನುದಾನಕ್ಕಿಂತ ಹೆಚ್ಚಿನ ಯೋಜನೆಗಳನ್ನು ಈ ರಾಜ್ಯಗಳಿಗೆ ಒದಗಿಸಿಕೊಡಲಾಗುತ್ತದೆ.. ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ನಿಧಿಯಲ್ಲಿ ಶೇಕಡಾ 30 ರಷ್ಟನ್ನು ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳಿಗೆ ಮೊದಲು ಹಂಚಲಾಗುತ್ತದೆ.. ಅದರ ನಂತರ, ಉಳಿದ 70 ಪ್ರತಿಶತ ಹಣವನ್ನು ಇತರ ರಾಜ್ಯಗಳಿಗೆ ನೀಡಲಾಗುತ್ತದೆ. 90 ರಷ್ಟು ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುದಾನವಾಗಿ ನೀಡಲಾಗುತ್ತದೆ ಮತ್ತು ಶೇಕಡಾ 10 ರಷ್ಟು ಹಣವನ್ನು ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳಿಗೆ ಸಾಲವಾಗಿ ನೀಡಲಾಗುತ್ತದೆ.. ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳಿಗೆ ತೆರಿಗೆಗಳಲ್ಲೂ ವಿನಾಯಿತಿ ನೀಡಲಾಗುತ್ತದೆ..
ಕೈಗಾರಿಕೆಗಳನ್ನು ಸ್ಥಾಪಿಸುವವರಿಗೆ ಸಹಾಯಧನ ನೀಡಲಾಗುವುದು. ಹಲವಾರು ರೀತಿಯಲ್ಲಿ ಪ್ರೋತ್ಸಾಹಧನಗಳನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ. ಸಾಲಗಳ ಮರುಪಾವತಿಗೆ ಹೆಚ್ಚಿನ ಸಮಯಾವಕಾಶ ಅಥವಾ ವಸೂಲಾತಿಯನ್ನು ಮುಂದೂಡಿಕೆ ಸಹ ಮಾಡಲಾಗುತ್ತದೆ.

Share Post