ಶಾಸಕ ಮಾಡಾಳ್‌ಗೆ ಬೇಲ್ ಸಿಗುತ್ತಾ..?; ಇಲ್ಲಾ ಬಂಧನವಾಗುತ್ತಾ..?
ಬೆಂಗಳೂರು; ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಇವತ್ತು ಪ್ರಮುಖವಾದ ದಿನ. ಇಂದು ಹೈಕೋರ್ಟ್‌ನಲ್ಲಿ ಅವರು ಸಲ್ಲಿಸರುವ ನಿರೀಕ್ಷಣಾ ಜಾಮೀನು ಅರ್ಜಿ ಇಂದು ವಿಚಾರಣೆಗೆ ಬರಲಿದೆ. ಜಾಮೀನು ಸಿಕ್ಕರೆ ಶಾಸಕ ಮಾಡಾಳ್ ಬಚಾವ್ ಆಗ್ತಾರೆ. ಇಲ್ಲದಿದ್ದರೆ ಬಂಧನವಾಗುವ ಸಾಧ್ಯತೆ ಹೆಚ್ಚಿದೆ.
ಮಾಡಾಳ್ ಪುತ್ರ ಪ್ರಶಾಂತ್ ನಲವತ್ತು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಅನಂತರ ಅವರ ಮನೆ, ಕಚೇರಿಯಲ್ಲಿ ಒಟ್ಟು ಎಂಟು ಕೋಟಿ ರೂಪಾಯಿ ನಗದು ಸಿಕ್ಕಿತ್ತು. ಈ ಪ್ರಕರಣದಲ್ಲಿ ಮಾಡಾಳ್ ಎ1 ಆರೋಪಿ. ಪ್ರಕರಣ ಬೆಳಕಿಗೆ ಬಂದಾಗಿನಿಂದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ. ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದರ ಭಾಗವಾಗಿ ನಿರೀಕ್ಷಣಾ ಜಾಮೀನು ಹಾಗೂ ಅವರ ಮೇಲಿನ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ ಇಂದು ಈ ಬಗ್ಗೆ ಆದೇಶ ನೀಡಲಿದೆ.
ಮಾಡಾಳ್‌ಗೆ ಇವತ್ತು ಜಾಮೀನು ಸಿಗದೇ ಹೋದರೆ ಅವರ ರಾಜಕೀಯ ಜೀವನ ಮಸುಕಾಗಲಿದೆ. ಜಾಮೀನು ಸಿಗದೇ ಇದ್ದರೆ ಅವರ ಬಂಧನವಾಗೋದು ಬಹುತೇಕ ಪಕ್ಕಾ. ಮಾಜಿ ಸಿಎಂ ಯಡಿಯೂರಪ್ಪ ಅವರೇ ಮಾಡಾಳ್ ಬಂಧನವಾಗುತ್ತೆ ಎಂದು ಹೇಳಿದ್ದಾರೆ. ಈ ನಡುವೆ ಮಾಡಾಳ್ ಪ್ರತಿನಿಧಿಸುವ ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಿಚಾರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿದೆ. ಮಾಡಾಳ್ ಪ್ರಕರಣದಲ್ಲಿ ಸಿಕ್ಕಿಕೊಂಡಿರುವುದರಿಂದ ಅವರಿಗೆ ಟಿಕೆಟ್ ಸಿಗೋದಿಲ್ಲ. ಹೀಗಾಗಿ ಅವರ ಹರಿಯ ಪುತ್ರನಿಗೆ ಟಿಕೆಟ್ ಕೇಳುವ ಸಾಧ್ಯತೆ ಇದೆ. ಈ ನಡುವೆ ಶಿವಕುಮಾರ್ ಹಾಗೂ ಟಿ.ವಿ.ರಾಜು ಅವರು ಬಿಜೆಪಿ ಟಿಕೆಟ್ ಬಯಸುತ್ತಿದ್ದಾರೆ.
ಇನ್ನು ಮಾಡಾಳ್ ಬಂಧನವಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಜೊತೆಗೆ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.