Politics

ಈ ಲೋಕಸಭಾ ಕ್ಷೇತ್ರದ ಜನ ಹೊಸ ಅಭ್ಯರ್ಥಿಗಳನ್ನು ಮಾತ್ರ ಗೆಲ್ಲಿಸೋದು..!

ಎಲ್ಲಾ ಕಡೆ ಕುಟುಂಬ ರಾಜಕೀಯ ಜೋರಾಗಿ ನಡೆಯುತ್ತದೆ.. ಒಬ್ಬರು ಒಂದು ಕ್ಷೇತ್ರದಲ್ಲಿ ಗೆದ್ದರು ಅಂದರೆ, ಅದಕ್ಕೇ ಫಿಕ್ಸ್‌ ಆಗಿಬಿಡುತ್ತಾರೆ.. ವಂಶಪಾರಂಪರ್ಯವಾಗಿ ಮಕ್ಕಳು, ಮೊಮ್ಮಕ್ಕಳು ಕೂಡಾ ಅದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ.. ಜನರೂ ಕೂಡಾ ಅವರನ್ನೇ ಗೆಲ್ಲಿಸುತ್ತಾ ಬರುತ್ತಾರೆ.. ಆದ್ರೆ ಇಲ್ಲೊಂದು ಕ್ಷೇತ್ರ ಇದೆ.. ಇಲ್ಲಿ, ಎರಡನೇ ಬಾರಿ ಸ್ಪರ್ಧೆ ಮಾಡುವವರನ್ನು ಸೀದಾ ಮನೆಗೆ ಕಳುಹಿಸಿಬಿಡುತ್ತಾರೆ.. ಪ್ರತಿ ಬಾರಿಯೂ ಹೊಸ ಅಭ್ಯರ್ಥಿಯನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸುತ್ತಾರೆ..

5 ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ವಿಶೇಷ ಕ್ಷೇತ್ರ;

ಯಾವಾಗಲೂ ಹೊಸಬರನ್ನೇ ಆಯ್ಕೆ ಮಾಡುವ ಲೋಕಸಭಾ ಬೇರೆ ಯಾವುದೂ ಅಲ್ಲ.. ತೆಲಂಗಾಣದ ಭುವನಗಿರಿ ಲೋಕಸಭಾ ಕ್ಷೇತ್ರ.. 2008ರಲ್ಲಿ ನಡೆದ ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಯಲ್ಲಿ ಭುವನಗಿರಿ ಲೋಕಸಭಾ ಕ್ಷೇತ್ರ ರಚನೆಯಾಯಿತು.. ಈ ಕ್ಷೇತ್ರದ ವಿಶೇಷತೆ ಏನು ಅಂದ್ರೆ 4 ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ.. ಯಾದಾದ್ರಿ ಭುವನಗಿರಿ ಜಿಲ್ಲೆಯ ಭುವನಗಿರಿ, ಸೂರ್ಯಪೇಟ ಜಿಲ್ಲೆಯ ಆಲೇರು, ತುಂಗತುರ್ಥಿ, ನಲ್ಗೊಂಡ ಜಿಲ್ಲೆಯ ನಗಿರೇಕಲ್, ರಂಗಾರೆಡ್ಡಿ ಜಿಲ್ಲೆಯ ಮುನುಗೋಡು, ಇಬ್ರಾಹಿಂಪಟ್ಟಣ ಹಾಗೂ ಜನಗಾಂ ಜಿಲ್ಲೆಯ ಜನಗಾಂ ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.. ಇದುವರೆಗೆ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಲೋಕಸಭಾ ಚುನಾವಣೆ ನಡೆದಿದ್ದು, ನಾಲ್ಕೂ ಬಾರಿಯೂ ಹೊಸ ಅಭ್ಯರ್ಥಿಗಳೇ ಗೆದ್ದಿದ್ದಾರೆ..

ನಾಲ್ಕು ಬಾರಿಯೂ ಹೊಸ ಅಭ್ಯರ್ಥಿಗಳಿಗೇ ಜಯ ಮಾಲೆ;

2009ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಸಂಸದರಾಗಿ ಆಯ್ಕೆಯಾಗಿದ್ದರು. ಕೋಮಟಿ ರೆಡ್ಡಿ ವೆಂಕಟ ರೆಡ್ಡಿ ಸಹೋದರ ರಾಜಗೋಪಾಲರೆಡ್ಡಿ ನೇರವಾಗಿ ಉದ್ಯಮ ಕ್ಷೇತ್ರದಿಂದ ಬಂದು ಸಂಸದರಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಬಿಆರ್ ಎಸ್ ಅಭ್ಯರ್ಥಿಯಾಗಿ ಡಾ. ಬೂರ ನರಸಯ್ಯಗೌಡ ಸಂಸದರಾಗಿ ಆಯ್ಕೆಯಾದರು. ಬೂರ ನರಸಯ್ಯಗೌಡರು ವೈದ್ಯರಾಗಿದ್ದು, ಮೊದಲ ಬಾರಿಗೆ ರಾಜಕೀಯಕ್ಕೆ ಬಂದಿದ್ದರು.. ತೆಲಂಗಾಣ ಚಳವಳಿಯಲ್ಲಿ, ವೈದ್ಯರ ಸಂಘದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ ಅವರು ಮೊದಲ ಬಾರಿಗೆ ಸಂಸದರಾದರು. 2019ರ ಚುನಾವಣೆಯಲ್ಲಿ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಗೆದ್ದಿದ್ದರು. ಕೋಮಟಿರೆಡ್ಡಿ ವೆಂಕಟರೆಡ್ಡಿ ಅದಕ್ಕೂ ಮುನ್ನ ಶಾಸಕರಾಗಿ, ಸಚಿವರಾಗಿ ರಾಜಕೀಯ ಅನುಭವ ಹೊಂದಿದ್ದಾರೆ. ಆದ್ರೆ ಲೋಕಸಭೆಗೆ ಅದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರು.. 2018ರ ಚುನಾವಣೆಯಲ್ಲಿ ಶಾಸಕರಾಗಿ ಸೋತಿದ್ದ ಕೋಮಟಿರೆಡ್ಡಿ ವೆಂಕಟರೆಡ್ಡಿ 2019ರಲ್ಲಿ ಪ್ರಥಮ ಬಾರಿಗೆ ಸಂಸದರಾಗಿ ಸ್ಪರ್ಧಿಸಿ ಗೆದ್ದಿದ್ದರು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಭುವನಗಿರಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಾಮಲ ಕಿರಣ್ ಕುಮಾರ್ ರೆಡ್ಡಿ ಗೆಲುವು ಸಾಧಿಸಿದ್ದಾರೆ. ಚಾಮಲ ಕಿರಣ್ ಕುಮಾರ್ ರೆಡ್ಡಿ ಅವರು ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದರೂ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಕ್ಕಿರಲಿಲ್ಲ.. ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ..

 

Share Post