BengaluruPolitics

ಯಾರಾಗ್ತಾರೆ ಸಿಎಂ..?; ಸಂಜೆ ಶಾಸಕಾಂಗ ಪಕ್ಷದ ಸಭೆ

ಬೆಂಗಳೂರು; ಕಾಂಗ್ರೆಸ್‌ ಐತಿಹಾಸಿಕ ಗೆಲುವು ಸಾಧಿಸಿದ್ದಾಗಿದೆ. ಈಗ ಸಿಎಂ ಯಾರಾಗ್ತಾರೆ ಅನ್ನೋದು ಕುತೂಹಲದ ಪ್ರಶ್ನೆ. ಯಾಕಂದ್ರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ರೇಸ್‌ನಲ್ಲಿದ್ದಾರೆ. ಆದ್ರೆ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಸಿಎಂ ಸ್ಥಾನ ದಕ್ಕೋದು.. ಇದನ್ನು ನಿರ್ಧಾರ ಮಾಡೋದು ಕೂಡಾ ದೊಡ್ಡ ಸಮಸ್ಯೆಯೇ. ಯಾಕಂದ್ರೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಇಬ್ಬರೂ ಬೇಕು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಸಂಘಟನೆಯಾಗಬೇಕಾದರೆ ಇಬ್ಬರೂ ಬೇಕು. ಹೀಗಾಗಿ ಯಾರು ಸಿಎಂ ಆಗ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಇಂದು ಸಂಜೆ 5.30ಕ್ಕೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಇದರಲ್ಲಿ ಶಾಸಕರು ಯಾರ ಪರವಾಗಿ ಒಲವು ತೋರಿಸುತ್ತಾರೆ..?, ಹೈಕಮಾಂಡ್‌ ಯಾರಿಗೆ ಮಣೆ ಹಾಕುತ್ತೆ..? ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಇಬ್ಬರು ಪ್ರಬಲರೇ ಆಗಿರುವುದರಿಂದ ಹೈಕಮಾಂಡ್‌ಗೆ ಇಬ್ಬರೂ ಬೇಕಾದವರು. ಆದ್ರೆ ಹೈಕಮಾಂಡ್‌ ಡಿ.ಕೆ.ಶಿವಕುಮಾರ್‌ ಮೇಲೆ ಒಲವು ತೋರುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಕಟ್ಟಿರುವುದು ಹಾಗೂ ಹೈಕಮಾಂಡ್‌ಗೆ ನಿಷ್ಟರಾಗಿರುವುದು ಡಿ.ಕೆ.ಶಿವಕುಮಾರ್‌ ಅವರಿಗೆ ಪ್ಲಸ್‌ ಪಾಯಿಂಟ್‌. ಆದ್ರೆ ಸಿದ್ದರಾಮಯ್ಯ ಅವರು ಇದು ನನಗೆ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ. ನಾನು ಇನ್ನು ಚುನಾವಣೆಗೆ ಸ್ಪರ್ಧಿಸಲ್ಲ, ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ ಅವರು ಈ ಬಾರಿ ಸಿಎಂ ಸ್ಥಾನ ಕೇಳುತ್ತಿದ್ದಾರೆ. ಇನ್ನು ಶಾಸಕರು ಯಾರಿಗೆ ಬೆಂಬಲ ನೀಡುತ್ತಾರೆ ಎಂಬುದರ ಮೇಲೆ ಹೈಕಮಾಂಡ್‌ ನಿರ್ಧಾರ ಮಾಡುವ ಸಾಧ್ಯತೆ ಇದೆ. ಪಿಸಿಸಿ ಅಧ್ಯಕ್ಷರಾಗಿದ್ದವರೇ ಸಿಎಂ ಮಾಡಲಾಗುತ್ತದೆ ಎಂಬ ಅಭಿಪ್ರಾಯವಿದೆ. ಆದ್ರೆ ಸಿದ್ದರಾಮಯ್ಯ ಅವರು ಇದನ್ನು ಒಪ್ಪುತ್ತಿಲ್ಲ. ಈ ಹಿಂದೆ ಪಿಸಿಸಿ ಅಧ್ಯಕ್ಷರಲ್ಲದವರಿಗೂ ಸಿಎಂ ಸ್ಥಾನ ನೀಡಲಾಗಿದೆ ಎಂದು ಉದಾಹರಣೆಗಳನ್ನು ಮುಂದಿಡುತ್ತಾರೆ.

ಇದೀಗ ಸಿದ್ದರಾಮಯ್ಯ ಅವರು ತಮಗೆ ಹತ್ತಿರದ ಶಾಸಕರಿಂದ ಬೆಂಬಲ ಕೇಳುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗ ಹಾಗೂ ಮೈಸೂರು ಭಾಗದ ಶಾಸಕರು ತಮಗೆ ಬೆಂಬಲ ನೀಡಬಹುದು ಎಂದು ಸಿದ್ದರಾಮಯ್ಯ ನಂಬಿದ್ದಾರೆ. ಅವರ ಬೆಂಬಲ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇತ್ತ ಡಿ.ಕೆ.ಶಿವಕುಮಾರ್‌ ಅವರು ಹಳೇಮೈಸೂರು ಭಾಗ ಹಾಗೂ ಮಧ್ಯ ಕರ್ನಾಟಕ ಭಾಗದ ಶಾಸಕರ ಬೆಂಬಲ ಸಿಗುತ್ತದೆ ಎಂದು ನಂಬಿದ್ದಾರೆ. ಹೀಗಾಗಿ ಸಂಜೆ ಮೀಟಿಂಗ್‌ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ಏನು ತೀರ್ಮಾನ ಏನು ಮಾಡುತ್ತೆ ಅನ್ನೋದರ ಬಗ್ಗೆ ಕುತೂಹಲ ಹೆಚ್ಚಾಗಿದೆ.

Share Post