Politics

ಕೊನೆಗೂ ಜೆಡಿಎಸ್‌ ಪಾಲಿಗೆ ಸಿಕ್ತು ಕೋಲಾರ; ಬಿಜೆಪಿಯಿಂದ ಅಧಿಕೃತ ಘೋಷಣೆ

ಬೆಂಗಳೂರು; ರಾಜ್ಯದಲ್ಲಿ ಲೋಕಸಭಾ ಚುನಾವಣೆಗಾಗಿ ಜೆಡಿಎಸ್‌-ಬಿಜೆಪಿ ಮೈತ್ರಿ ಮಾಡಿಕೊಂಡಿವೆ.. ಆದ್ರೆ ಜೆಡಿಎಸ್‌ ಸೀಟು ಹಂಚಿಕೆ ವಿಚಾರದಲ್ಲಿ ತೀವ್ರ ಗೊಂದಲ ಇತ್ತು.. ಯಾಕಂದ್ರೆ ಜೆಡಿಎಸ್‌ಗೆ ಎಷ್ಟು ಸೀಟು ಅನ್ನೋದನ್ನು ಬಿಜೆಪಿ ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ.. ಜೆಡಿಎಸ್‌ ಎರಡೇ ಕ್ಷೇತ್ರ ಎಂಬ ಮಾತೂ ಕೇಳಿಬಂದಿತ್ತು.. ಆದ್ರೆ, ಇದೀಗ ಜೆಡಿಎಸ್‌ಗೆ ಮೂರು ಕ್ಷೇತ್ರ ಅಧಿಕೃತವಾಗಿದೆ.. ಜೆಡಿಎಸ್‌ಗೆ ಮಂಡ್ಯ, ಹಾಸನದ ಜೊತೆಗೆ ಕೋಲಾರ ಕ್ಷೇತ್ರವನ್ನೂ ಬಿಟ್ಟುಕೊಡಲಾಗಿದೆ..

ಜೆಡಿಎಸ್‌ಗೆ ಮೂರು ಕ್ಷೇತ್ರ ಅಧಿಕೃತ ಘೋಷಣೆ;

ಬೆಂಗಳೂರು ಅರಮನೆ ಮೈದಾನದದ ವೃಕ್ಷ ಸಭಾಂಗಣದಲ್ಲಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಮಟ್ಟದ ಕಾರ್ಯಾಗಾರ ನಡೆಯುತ್ತಿದೆ.. ಈ ಕಾರ್ಯಾಗಾರದಲ್ಲಿ ಬಿಜೆಪಿಯ ಚುನಾವಣಾ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲಾ ಅವರು ಜೆಡಿಎಸ್‌ಗೆ ಮೂರು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿರುವ ಬಗ್ಗೆ ಅಧಿಕೃತವಾಗಿ ಮಾತನಾಡಿದ್ದಾರೆ. ಜೆಡಿಎಸ್‌ಗೆ ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳನ್ನು ಬಿಟ್ಟಿಕೊಟ್ಟಿದ್ದೇವೆ.. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ.. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಒಂದಾಗಿ ಕ್ಯಾಂಪೇನ್‌ ಮಾಡುತ್ತೇವೆ ಎಂದಿದ್ದಾರೆ. ಇದರಿಂದಾಗಿ ಜೆಡಿಎಸ್‌-ಬಿಜೆಪಿ ನಡುವೆ ಇದ್ದಂತಹ ಗೊಂದಲ ನಿವಾರಣೆಯಾದಂತಾಗಿದೆ.

ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ;

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್‌ಗೆ ಮೂರು ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ.. ಬಿಜೆಪಿ 25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ.. ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಜೆಡಿಎಸ್‌ ನಾಯಕರು ಯಾವುದೇ ಹಸ್ತಕ್ಷೇಪ ಮಾಡಿಲ್ಲ.. ಹೀಗಾಗಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರಾಗುತ್ತಾರೆ ಎಂಬುದು ಮುಖ್ಯವಲ್ಲ. ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಿ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿಯ ಚುನಾವಣಾ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲಾ ಹೇಳಿದ್ದಾರೆ.. ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಸ್ಥಳೀಯರು ನಾಯಕರು ಜೆಡಿಎಸ್‌ ವಿರೋಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ರಾಧಾ ಮೋಹನ್‌ ದಾಸ್‌ ಅವರು ನಿಮ್ಮ ವೈಯಕ್ತಿಕ ಭಿನ್ನಾಭಿಪ್ರಾಯ ಚುನಾವಣೆಗೆ ತರಬೇಡಿ.. ಇಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.. ಎಲ್ಲರೂ ಗೆಲ್ಲಬೇಕು ಎಂದು ರಾಧಾ ಮೋಹನ್‌ ದಾಸ್‌ ಹೇಳಿದ್ದಾರೆ..

ಕಾರ್ಯಾಗಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಪ್ರೀತಮ್ ಗೌಡ, ಪಿ.ರಾಜು, ಪರಿಷತ್ ಸದಸ್ಯ ಭಾರತಿ ಶೆಟ್ಟಿ, ಕೇಸವ ಪ್ರಸಾದ್ ಈ ವೇಳೆ ಉಪಸ್ಥಿತರಿದ್ದರು.

ಮೈಸೂರಲ್ಲಿ ಬೃಹತ್‌ ಸಮಾವೇಶ ಸಾಧ್ಯತೆ;

ಈಗಾಗಲೇ ಪ್ರಧಾನಿ ಮೋದಿಯವರು ಎರಡು ಬಾರಿ ರಾಜ್ಯಕ್ಕೆ ಬಂದು ಹೋಗಿದ್ದಾರೆ.. ಕಲಬುರಗಿ ಹಾಗೂ ಶಿವಮೊಗ್ಗದಲ್ಲಿ ಪ್ರಚಾರ ನಡೆಸಿದ್ದಾರೆ.. ಆದ್ರೆ ಈ ಸಭೆಗಳಿಗೆ ಜೆಡಿಎಸ್‌ ನಾಯಕರನ್ನು ಕರೆದಿರಲಿಲ್ಲ.. ಇದರಿಂದಾಗಿಯೂ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಮುನಿಸಿಕೊಂಡಿದ್ದರು.. ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎಂದು ಹೇಳಿದ್ದರು.. ಇದೀಗ ಅವರ ಮುನಿಸು ಕಡಿಮೆ ಮಾಡುವುದಕ್ಕಾಗಿ ಮೈಸೂರಿನಲ್ಲಿ ಬೃಹತ್‌ ಸಮಾವೇಶಕ್ಕೆ ಬಿಜೆಪಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ.. ಹಳೇ ಮೈಸೂರು ಭಾಗದ ಜನರನ್ನು ಸೇರಿಸಿ ದೊಡ್ಡ ಸಮಾವೇಶ ಮಾಡಿ, ಪ್ರಧಾನಿ ಮೋದಿ ಹಾಗೂ ದೇವೇಗೌಡರ ಮುಂದಾಳತ್ವದಲ್ಲಿ ಈ ಸಮಾವೇಶ ನಡೆಸಲು ಚಿಂತನೆ ನಡೆಸಲಾತ್ತಿದೆ.. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಪ್ರಾಬಲ್ಯ ಹೆಚ್ಚಿದೆ.. ಬಿಜೆಪಿ ಅದರ ಲಾಭ ಪಡೆಯಬೇಕಾದರೆ, ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಪ್ರಚಾರ ಮಾಡಬೇಕಾದ ಅಗತ್ಯವಿದೆ.. ಇದನ್ನು ಮನಗಂಡಿರುವ ಬಿಜೆಪಿ ನಾಯಕರು ಮೋದಿ ಹಾಗೂ ದೇವೇಗೌಡರ ನೇತೃತ್ವದಲ್ಲಿ ಮೈಸೂರಿನಲ್ಲಿ ಬೃಹತ್‌ ಸಮಾವೇಶಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಾಗಾರದಲ್ಲಿ ಈ ವಿಚಾರವೂ ಚರ್ಚೆಯಾಗುವ ಸಾಧ್ಯತೆ ಇದೆ..

Share Post