BengaluruPolitics

ಗ್ರಾಮೀಣ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ಮಾಡಲು ಕ್ರಮ; ಡಿ.ಕೆ.ಶಿವಕುಮಾರ್‌

ಬೆಂಗಳೂರು; ನಮ್ಮ ಗ್ರಾಮೀಣ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ಮಾಡಲು ನಾನು ಪ್ರತ್ಯೇಕ ಕಾರ್ಯಕ್ರಮವನ್ನು ಆಲೋಚಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳ ಬಗ್ಗೆ ಚರ್ಚಿಸಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಶೈಕ್ಷಣಿಕ ಕ್ಷೇತ್ರದಲ್ಲಿ ಸಿಎಸ್ಆರ್ ಸಮಾವೇಶ 2023ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಪ್ರತಿ ಎರಡು ಪಂಚಾಯ್ತಿಗಳನ್ನು ಸೇರಿಸಿ ಪಬ್ಲಿಕ್ ಶಾಲೆ ಆರಂಭಿಸಬೇಕು. ಅದಕ್ಕೆ ಬೇಕಾಗಿರುವ ಜಾಗವನ್ನು ಸರ್ಕಾರದ ವತಿಯಿಂದ ನೀಡುತ್ತೇವೆ. ನೀವು ಅಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಿ. ಪ್ರಮುಖ ಶಿಕ್ಷಣ ಸಂಸ್ಥೆಗಳು ಸರ್ಕಾರದ ಸಹಯೋಗದಲ್ಲಿ ಈ ಶಾಲೆಗಳ ಜವಾಬ್ದಾರಿ ವಹಿಸಿಕೊಳ್ಳುವಂತೆ ನಾವು ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.

ನೀವು ನಮಗೆ ಹಣ ನೀಡಬೇಡಿ, ನಾವು ಕಾರ್ಯಕ್ರಮದ ರೂಪುರೇಷೆ ನೀಡುತ್ತೇವೆ. ನೀವೇ ಕಟ್ಟಡವನ್ನು ನಿರ್ಮಾಣ ಮಾಡಿ. ಈಗಾಗಲೇ ನಾನು ವಿಪ್ರೋ, ಇಫೋಸಿಸ್ ನಂತಹ ಪ್ರಮುಖ ಸಂಸ್ಥೆಗಳ ಜತೆ ಮಾತನಾಡಿದ್ದು ಅವರು ಸಾವಿರ ಕೋಟಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲು ಸಿದ್ಧರಿದ್ದಾರೆ. ಮುಂದಿನ 3 ವರ್ಷಗಳಲ್ಲಿ ರಾಜ್ಯದ 2 ಸಾವಿರ ಗ್ರಾಮ ಪಂಚಾಯ್ತಿಗಳಲ್ಲಿ ಈ ಪಬ್ಲಿಕ್ ಶಾಲೆಗಳು ನಿರ್ಮಾಣವಾಗಲಿದ್ದು, ಸರ್ಕಾರದಿಂದ ಒಂದೇ ಒಂದು ರೂಪಾಯಿ ವೆಚ್ಚವಿಲ್ಲದೇ ನಿರ್ಮಾಣವಾಗಲಿದೆ ಎಂದು ನಾನು ಈ ವೇದಿಕೆ ಮೂಲಕ ನಮ್ಮ ಮುಖ್ಯಮಂತ್ರಿಗಳು ಹಾಗೂ ನಮ್ಮ ಸಹೋದ್ಯೋಗಿಗಳಿಗೆ ತಿಳಿಸಲು ಬಯಸುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಈ ವಿಚಾರದಲ್ಲಿ ಕಾರ್ಪೋರೇಟ್ ಸಂಸ್ಥೆಗಳ ಜವಾಬ್ದಾರಿ ಮಹತ್ವದ್ದಾಗಿದ್ದು, ನಾವು ಅವರಿಗೆ ಬೇಕಾದ ಎಲ್ಲಾ ಸಹಕಾರ ನೀಡಲು ಸಿದ್ಧರಿದ್ದೇವೆ. ನಾವು ಮೊದಲು ಪ್ರಾಥಮಿಕ ಶಿಕ್ಷಣದ ಬಗ್ಗೆ ಗಮನಹರಿಸೋಣ, ನಂತರ ಹಂತಹಂತವಾಗಿ ಕೌಶಲ್ಯಭಿವೃದ್ಧಿಯತ್ತ ಗಮನಹರಿಸೋಣ. ಆಗ ಸಮಾಜ ತಾನಾಗಿಯೇ ಅಭಿವೃದ್ಧಿ ಹೊಂದುತ್ತದೆ. ನಾನು ಹುಟ್ಟಿನಿಂದ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಿಂದ ರಾಜಕಾರಣಿ. ಇಂದು ಶಿಕ್ಷಣತಜ್ಞನಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಈ ಸಮಾವೇಶದಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ದೇಶ ಹಾಗೂ ರಾಜ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದು, ನಿಮ್ಮೆಲ್ಲರಿಗೂ ಅಭಿನಂದನೆಗಳು ಎಂದರು.

ಬೆಂಗಳೂರಿನಲ್ಲಿ ಇಂದು ಇರುವ ಜನಸಂಖ್ಯೆ ಎಷ್ಟು? ಇದು ಏರಿಕೆಯಾಗಲು ಕಾರಣವೇನು? ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿರುವುದೇಕೆ? ನನ್ನ ಕ್ಷೇತ್ರದ 70 ಸಾವಿರ ಮತದಾರರು ಬೆಂಗಳೂರಿನಲ್ಲಿದ್ದಾರೆ. ಈ ವಿಚಾರವಾಗಿ ನಾನು ಸಮೀಕ್ಷೆ ನಡೆಸಿದಾಗ ವಲಸೆ ಬಂದಿರುವವರು ಶಿಕ್ಷಣ ಹಾಗೂ ಉದ್ಯೋಗ ಕಾರಣಕ್ಕಾಗಿ ಬಂದಿದ್ದಾರೆ. ಈ ವಲಸೆ ತಪ್ಪಿಸುವುದು ಹೇಗೆ? ಗ್ರಾಮೀಣ ಭಾಗದ ಜನರ ವಲಸೆಯನ್ನು ನಾವು ತಪ್ಪಿಸದಿದ್ದರೆ ನಗರಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ನಗರ ಪ್ರದೇಶಕ್ಕೆ ಬಂದವರೆಲ್ಲರಿಗೂ ಉತ್ತಮ ಸವಲತ್ತು ನೀಡಲು ಸಾಧ್ಯವಿಲ್ಲ. ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಚರ್ಚೆ ನಡೆದು ದೇಶ ನಿರ್ಮಾಣದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಕೂಡ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಲಾಯಿತು ಎಂದು ಡಿಕೆಶಿ ಹೇಳಿದರು.

 

Share Post