ಕಾಂಗ್ರೆಸ್ ಸೇರೋದು ಆತ್ಮಹತ್ಯೆ ಮಾಡಿಕೊಂಡಂತೆ – ಸಿಪಿ ಯೋಗೀಶ್ವರ್
ರಾಮನಗರ : ಗುರುವಾರ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಸಿಪಿ ಯೋಗೀಶ್ವರ್ ಕಾಂಗ್ರೆಸ್ ಅನ್ನು ಟೀಕಿಸಿದರು. ನಾನು ಕಾಂಗ್ರೆಸ್‌ಗೆ ಹೋಗೋದು ಎಂದರೆ ಅದು ಆತ್ಮಹತ್ಯೆ ಮಾಡಿಕೊಂಡಂತೆ. ನಾನು ಬಿಜೆಪಿಯಲ್ಲಿಯೇ ಇರುತ್ತೇನೆ ಎಂದು ಸಿಪಿ ಯೋಗೀಶ್ವರ್ ಹೇಳಿದ್ದಾರೆ.
1999ರಲ್ಲಿ ನಾನು ಮೊದಲ ಬಾರಿ ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸಬೇಕೆಂದು ಕೊಂಡಿದ್ದಾಗ ಡಿ ಕೆ ಶಿವಕುಮಾರ್ ಅವರು ಟಿಕೇಟ್ ತಪ್ಪಿಸಿದ್ದರು. 2013 ರಲ್ಲಿ ಬಿಜೆಪಿ ಸೇರಿದೆ. ಆದರೆ ಆಗ ಬಿಜೆಪಿಯಲ್ಲಿ ಇದ್ದ ಗೊಂದಲಗಳಿಂದ ಮೂರು ಭಾಗವಾಗಿತ್ತು. ಕಾಂಗ್ರೆಸ್ ನಿಂದ ಮತ್ತೆ ಟಿಕೇಟ್ ಕೇಳಿದಾಗ ಇದೇ ಡಿ ಕೆ ಶಿವಕುಮಾರ್ ಟಿಕೇಟ್ ತಪ್ಪಿಸಿದ್ದರು.
ಡಿಕೆ ಶಿವಕುಮಾರ್ ಅವರು ರಾಜಕೀಯವಾಗಿ ತೊಂದರೆ ಕೊಡುತ್ತಲೇ ಬಂದರು. ನಾನು 25 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಸಾಕಷ್ಟು ಕಾರಣಗಳಿಂದ ನಾನು ಪಕ್ಷಾಂತರಿಯಾಗಿಯೇ ಉಳಿದುಬಿಟ್ಟಿದ್ದೆ.
ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಡಿಕೆ ಸುರೇಶ್ ಅವರಿಂದ ಜಿಲ್ಲೆಯ ಜನತೆಗೆ ಅಪಮಾನವಾಗಿದೆ. ಅವರು ಕ್ಷಮೆ ಯಾಚಿಸಲೇ ಬೇಕು ಎಂದು ಒತ್ತಾಯಿಸಿದರು.
ಅಂಬೇಡ್ಕರ್ ಮತ್ತು ಕೆಂಪೇಗೌಡ ಪ್ರತಿಮೆಯನ್ನು ತಾವೇ ಉದ್ಘಾಟನೆ ಮಾಡುವ ಉದ್ದೇಶ ಹೊಂದಿದ್ದರು. ಅದಕ್ಕಾಗಿಯೇ ಸಿಎಂ ಕಾರ್ಯಕ್ರಮ ಹಾಳು ಮಾಡಲು ಸಂಚು ರೂಪಿಸಿದ್ದರು. ಇನ್ನು ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯುತ್ತಿದೆ. ಅದನ್ನು ಡಿಕೆ ಅವರಿಂದ ಸಹಿಸಲು ಆಗುತ್ತಿಲ್ಲ. ಇನ್ನು ಉಸ್ತುವಾರಿ ಸಚಿವರಾಗಿ ಅಶ್ವಥ್ ನಾರಾಯಣ್ ಜಿಲ್ಲೆಗೆ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ..
ಇನ್ನು ಮುಂದಿನ ಚುನಾವಣೆಯಲ್ಲಿ ನೀವು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೀರಿ ಎಂದು ಕೇಳಿದ ಪ್ರಶ್ನೆಗೆ ಪಕ್ಷದ ವರಿಷ್ಠರು ಎಲ್ಲಿ ಹೇಳುತ್ತಾರೆ ಅಲ್ಲಿಂದ ಸ್ಪರ್ಧೆ ಮಾಡಲು ನಾನು ಸಿದ್ಧನಿದ್ದೇನೆ. ಬೇಕಿದ್ದರೆ ಕನಕಪುರದಿಂದಲೂ ನಾನು ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.