BengaluruPolitics

ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸ್ತಾರಾ ಡಾ.ಸಿ.ಎನ್‌.ಮಂಜುನಾಥ್‌..?; ಗುಟ್ಟು ಬಿಟ್ಟುಕೊಟ್ಟ ಹೆಚ್‌.ಡಿ.ಕುಮಾರಸ್ವಾಮಿ!

ಬೆಂಗಳೂರು; ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಸ್ಥಾನದಿಂದ ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ ಡಾ.ಸಿ.ಎನ್‌.ಮಂಜುನಾಥ್‌ ಅವರು ಮಾಜಿ ಪ್ರಧಾನಿ ದೇವೇಗೌಡರ ಅಳಿಯನೂ ಹೌದು. ಇವರು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದ್ರೆ, ಸ್ವತಃ ಮಂಜುನಾಥ್‌ ಅವರೇ ಇಲ್ಲ ಎಂದು ಹೇಳಿದ್ದರು. ಇದೀಗ ಹೆಚ್‌.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ, ಡಾ.ಸಿ.ಎನ್‌.ಮಂಜುನಾಥ್‌ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂಬುದಕ್ಕೆ ಪುಷ್ಠಿ ಸಿಕ್ಕಂತಾಗಿದೆ. ವಿಶೇಷ ಅಂದ್ರೆ ಮಂಜುನಾಥ್‌ ಅವರು ಜೆಡಿಎಸ್‌ನಿಂದ ಅಲ್ಲದೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿಯವರು ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಡಾ.ಸಿ.ಎನ್‌.ಮಂಜುನಾಥ್‌ ಅವರು ರಾಜಕೀಯಕ್ಕೆ ಬರುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಮಂಜುನಾಥ್‌ ಅವರನ್ನು ಲೋಕಸಭೆಗೆ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಬಿಜೆಪಿ ನಾಯಕರೇ ಸಲಹೆ ಕೊಟ್ಟಿದ್ದಾರೆ. ಅದೂ ಕೂಡಾ ಮಂಜುನಾಥ್‌ ಅವರನ್ನು ನಮಗೆ ಬಿಟ್ಟುಬಿಡಿ ಬಿಜೆಪಿಯಿಂದಲೇ ಅವರಿಗೆ ಟಿಕೆಟ್‌ ನೀಡಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ.

ಡಾ.ಸಿಎ.ನ್‌.ಮಂಜುನಾಥ್‌ ಅವರು ಚುನಾವಣೆಗೆ ಸ್ಪರ್ಧೆ ಮಾಡಲು ಒಪ್ಪಿದರೆ ನಮಗೆ ಅದಕ್ಕಿಂತ ಒಳ್ಳೆಯ ಸುದ್ದಿ ಇಲ್ಲ. ಅದು ಒಳ್ಳೆಯ ತೀರ್ಮಾನವಾಗುತ್ತದೆ ಎಂದೂ ಕುಮಾರಸ್ವಾಮಿ ಹೇಳಿದ್ದಾರೆ. ಡಾ.ಸಿ.ಎನ್‌.ಮಂಜುನಾಥ್‌ ಅವರು ಉತ್ತಮ ಸಮಾಜಸೇವೆಯಿಂದ ಹೆಸರುವಾಸಿಯಾಗಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ ಅವರು ಗೆಲ್ಲುತ್ತಾರೆ ಎಂದೂ ಕುಮಾರಸ್ವಾಮಿ ಹೇಳಿದ್ದಾರೆ.

 

Share Post