Politics

ಬಿಜೆಪಿಯಲ್ಲಿ ಭಿನ್ನಮತದ ಜ್ವಾಲೆ; 9 ಕ್ಷೇತ್ರಗಳಲ್ಲಿ ಬಂಡಾಯ ಭೀತಿ!

ಬೆಂಗಳೂರು; ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್‌ಗೆ 3 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದ್ದು, ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಿದೆ.. ಇದರಲ್ಲಿ ಈಗಾಗಲೇ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.. ಈ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ.. ಕೆಲವೆಡೆ ನೇರವಾಗಿ ಬಂಡಾಯ ಸ್ಪರ್ಧೆಗೆ ತಯಾರಿ ನಡೆದಿದ್ದರೆ, ಉಳಿದ ಕಡೆ ಬಿಜೆಪಿ ಅಭ್ಯರ್ಥಿಗೆ ಒಳೇಟು ನೀಡಲು ಟಿಕೆಟ್‌ ವಂಚಿತರು ಪ್ಲ್ಯಾನ್‌ ಮಾಡುತ್ತಿದ್ದಾರೆ.. ಇದು ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ..

ಇದನ್ನೂ ಓದಿ; ಪಟ್ಟು ಸಡಿಲಿಸುತ್ತಿಲ್ಲ ಈಶ್ವರಪ್ಪ; ಸಂಧಾನಕ್ಕೆ ಹೋದವರಿಗೆ ನಿರಾಸೆ

ಒಂಬತ್ತು ಕ್ಷೇತ್ರದಲ್ಲಿ ಅಸಮಾಧಾನ ಹೊಗೆ;

20 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದ ಮೇಲೆ ರಾಜ್ಯ ಅಸಮಾಧಾನ ಹೊಗೆ ದಟ್ಟವಾಗಿದೆ.. ಟಿಕೆಟ್‌ ವಂಚಿತರು ಸಭೆಗಳನ್ನು ನಡೆಸುತ್ತಾ ತಮ್ಮದೇ ಪಕ್ಷದ ಅಭ್ಯರ್ಥಿಗಳಿಗೆ ಒಳೇಟು ನೀಡಲು ಮುಂದಾಗಿದ್ದಾರೆ.. ಶಿವಮೊಗ್ಗದಲ್ಲಿ ಬಿಜೆಪಿ ನಾಯಕ ಈಶ್ವರಪ್ಪ ಅವರು ನೇರವಾಗಿ ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯಲು ಮುಂದಾಗಿದ್ದಾರೆ.. 20 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಅಸಮಾಧಾನ ಉಂಟಾಗಿದೆ.. ತುಮಕೂರು, ದಾವಣಗೆರೆ, ಹಾವೇರಿ, ಕೊಪ್ಪಳ, ಮೈಸೂರು, ಬೀದರ್, ಬೆಂಗಳೂರು ಉತ್ತರ, ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಬಂಡಾಯದ ಕಾವು ಏರುತ್ತಿದೆ ಇದು ಬಿಜೆಪಿ ನಾಯಕರಿಗೆ ಟೆನ್ಷನ್‌ ಕ್ರಿಯೇಟ್‌ ಮಾಡಿದೆ..

ಇದನ್ನೂ ಓದಿ; ಮುಂಜಾನೆಯೇ ಹೆಚ್ಚು ಹೃದಯಾಘಾತ ಯಾಕೆ..?; ಇದಕ್ಕೆ ಕಾರಣ ಏನು..?

ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ;

ಬಿಜೆಪಿಯ ಹಿರಿಯ ನಾಯಕ ಈಶ್ವರಪ್ಪ ಅವರು ಹಾವೇರಿ ಕ್ಷೇತ್ರದಿಂದ ತಮ್ಮ ಪುತ್ರ ಕಾಂತೇಶ್‌ಗೆ ಟಿಕೆಟ್‌ ಕೇಳಿದ್ದರು.. ಆದ್ರೆ ಹೈಕಮಾಂಡ್‌ ಬಸವರಾಜ ಬೊಮ್ಮಾಯಿಗೆ ಟಿಕೆಟ್‌ ನೀಡಿದೆ.. ಇದಕ್ಕೆ ಯಡಿಯೂರಪ್ಪ ಕುಟುಂಬವೇ ಕಾರಣ ಎಂದು ಈಶ್ವರಪ್ಪ ಆರೋಪ ಮಾಡುತ್ತಿದ್ದಾರೆ.. ಹೀಗಾಗಿ ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯೋದಾಗಿ ಈಶ್ವರಪ್ಪ ಘೋಷಣೆ ಮಾಡಿದ್ದಾರೆ.. ಭಾನುವಾರವಾದ ನಿನ್ನೆ ರಾಜ್ಯ ಬಿಜೆಪಿ ಉಸ್ತುವಾರಿ ಸೇರಿ ಹಲವು ನಾಯಕರು ಈಶ್ವರಪ್ಪ ಅವರ ಮನವೊಲಿಸುವ ಪ್ರಯತ್ನ ಮಾಡಿದರಾದರೂ ಯಾವುದೇ ಪ್ರಯೋಜನವಾಗಿಲ್ಲ.. ನಾನು ಯಾವುದೇ ಕಾರಣಕ್ಕೂ ನಿರ್ಧಾರದಿಂದ ಹಿಂದೆ ಸರಿಯೋದಿಲ್ಲ ಅಂತ ಈಶ್ವರಪ್ಪ ಪಟ್ಟು ಹಿಡಿದು ಕೂತಿದ್ದಾರೆ.

ಇದನ್ನೂ ಓದಿ; ಮತದಾರ ಗುರುತಿನ ಚೀಟಿಯಲ್ಲಿ ಅಡ್ರೆಸ್ ಬದಲಿಸಬೇಕೇ..?; ಹೀಗೆ ಮಾಡಿ ಸಾಕು

ಮೈಸೂರಿನಲ್ಲಿ ಪ್ರತಾಪ ಸಿಂಹ ಸೈಲೆಂಟ್‌;

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಪ್ರತಾಪ ಸಿಂಹ ಅವರು ಉತ್ತಮ ಕೆಲಸ ಮಾಡಿದ್ದರು.. ಮೋದಿ ಅಭಿಮಾನಿಯಾಗಿ ಅವರು ಈ ಕ್ಷೇತ್ರಗಳಲ್ಲಿ ಯುವಕರನ್ನು ಸಂಘಟಿಸಿದ್ದರು… ಕಾಂಗ್ರೆಸ್‌-ಜೆಡಿಎಸ್‌ಗೆ ಉತ್ತಮ ವಾತಾವರಣವಿದ್ದ ಕ್ಷೇತ್ರದಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಬೆಳೆಸಿದ್ದರು.. ಆದ್ರೆ ಈ ಬಾರಿ ಪ್ರತಾಪ ಸಿಂಹಗೆ ಬದಲಾಗಿ ರಾಜವಂಶಸ್ಥ ಯದುವೀರ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.. ಇದರಿಂದಾಗಿ ಸಂಸದ ಪ್ರತಾಪ ಸಿಂಹ ಅವರು ಸೈಲೆಂಟ್‌ ಆಗಿದ್ದಾರೆ.. ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಕೂಡಾ ಸೈಲೆಂಟ್‌ ಆಗಿದ್ದಾರೆ.. ಉತ್ತಮ ಕೆಲಸ ಮಾಡಿದ ಪ್ರತಾಪ ಸಿಂಹ ಅವರಿಗೆ ಟಿಕೆಟ್‌ ಕೈತಪ್ಪಲು ಯದುವೀರ್‌ ಅವರೇ ಕಾರಣ ಎಂದು ಬಿಂಬಿಸಲಾಗುತ್ತಿದೆ.. ಕಾಂಗ್ರೆಸ್‌ ಕೂಡಾ ಇದರ ಲಾಭ ಪಡೆಯಲು ಮುಂದಾಗುತ್ತಿದೆ. ಇಂಡೈರೆಕ್ಟ್‌ ಆಗಿ ಪ್ರತಾಪ ಸಿಂಹ ಬೆಂಬಲಿಗರನ್ನು ಸಾಮಾಜಿಕ ಜಾಲತಾಣದಲ್ಲಿ ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ.. ಪ್ರತಾಪ ಸಿಂಹ ಆಡಿರುವ ಕೆಲ ಮಾತುಗಳು ಕೂಡಾ ಯದುವೀರ್‌ಗೆ ಒಳೇಟು ಬೀಳು ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ..

ಇದನ್ನೂ ಓದಿ;ಬೆಳಗಾವಿಗೆ ಶೆಟ್ಟರ್‌ ಅಲ್ಲ, ಫೈರ್‌ ಬ್ರಾಂಡ್‌ ಯತ್ನಾಳ್‌ಗೆ ಟಿಕೆಟ್‌?; ಏನಿದು ಟ್ವಿಸ್ಟ್‌?

ತುಮಕೂರಿನಲ್ಲಿ ಮಾಧುಸ್ವಾಮಿ ಮಾರಕವಾಗ್ತಾರಾ..?;

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಮಾಧುಸ್ವಾಮಿಯವರು ಬಿಜೆಪಿ ಟಿಕೆಟ್‌ ಬಯಸಿದ್ದರು.. ಆದ್ರೆ ಹಾಲಿ ಸಂಸದ ಜಿ.ಎಸ್‌.ಬಸವರಾಜು ಹಾಗೂ ಯಡಿಯೂರಪ್ಪ ಸೇರಿ ವಿ.ಸೋಮಣ್ಣ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಇದರಿಂದಾಗಿ ಮಾಧುಸ್ವಾಮಿಯವರು ನೇರವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.. ವಿ.ಸೋಮಣ್ಣ ಅವರು ಮನೆಗೆ ಬರುತ್ತೇನೆ ಎಂದು ಹೇಳಿದರೂ ಮಾಧುಸ್ವಾಮಿ ಬರಬೇಡ ಎಂದಿದ್ದಾರಂತೆ.. ಆ ಮಟ್ಟಿಗೆ ಬೆಂಕಿಯ ಜ್ವಾಲೆ ಉರಿಯುತ್ತಿದೆ.. ಈ ಬಾರಿ ತುಮಕೂರಿನಲ್ಲಿ ವಿ.ಸೋಮಣ್ಣಗೆ ಭಾರೀ ಒಳೇಟು ಬೀಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ..

ಇದನ್ನೂ ಓದಿ; ಶಿವಮೊಗ್ಗ ಲೋಕಸಭಾ; BSY ವಿರುದ್ಧ ʻಈಶಾʼಸ್ತ್ರ ಪ್ರಯೋಗ, ಗೀತಾಗೆ ʻಕುಮಾರʼದೆಸೆ

ರಾಮುಲು ವಿರುದ್ಧ ತೊಡೆತಟ್ಟಿದ ಮಾಜಿ ಶಾಸಕ ತಿಪ್ಪೇಸ್ವಾಮಿ;

ಬಳ್ಳಾರಿ ಕ್ಷೇತ್ರದಿಂದ ಮಾಜಿ ಶಾಸಕ ತಿಪ್ಪೇಸ್ವಾಮಿಯವರು ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು.. ಆದ್ರೆ ಅಲ್ಲಿ ಬಿಜೆಪಿ ಹೈಕಮಾಂಡ್‌ ಶ್ರೀರಾಮುಲುಗೆ ಮಣೆ ಹಾಕಿದೆ.. ಇದರಿಂದಾಗಿ ತಿಪ್ಪೇಸ್ವಾಮಿ ತೀವ್ರ ಅಸಮಾಧಾನಗೊಂಡಿದ್ದಾರೆ.. ಶ್ರೀರಾಮುಲು ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯೋದಕ್ಕೆ ತಿಪ್ಪೇಸ್ವಾಮಿ ರೆಡಿಯಾಗಿ ನಿಂತಿದ್ದಾರೆ.. ಇನ್ನೊಂದೆಡೆ ಜನಾರ್ದನರೆಡ್ಡಿ ಕೂಡಾ ಶ್ರೀರಾಮುಲುಗೆ ನೇರವಾಗಿ ಬೆಂಬಲ ವ್ಯಕ್ತಪಡಿಸುತ್ತಿಲ್ಲ… ತಿಪ್ಪೇಸ್ವಾಮಿ ಸ್ಪರ್ಧೆಯಿಂದ ವಿಜಯನಗರ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳಲ್ಲಿ ಮತ ವಿಭಜನೆಯಾಗುವುದು ನಿಶ್ಚಿತ.. ಇದ್ರಿಂದ ಕಾಂಗ್ರೆಸ್‌ ಅನುಕೂಲವಾಗಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; Mysore Loksabha; ಮೈಸೂರಲ್ಲಿ ಯತೀಂದ್ರ-ಯದುವೀರ ಯುದ್ಧ ಫಿಕ್ಸ್‌!

ದಾವಣಗೆರೆಯಲ್ಲೂ ಆಂತರಿಕ ಭಿನ್ನಮತ ತಾರಕಕ್ಕೆ;

ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಸೇರಿ ಹಲವರು ಟಿಕೆಟ್‌ ಆಕಾಂಕ್ಷಿಯಾಗಿದ್ದರು.. ಜೊತೆಗೆ ಹಾಲಿ ಸಂಸದ ಸಿದ್ದೇಶ್ವರ್‌ ಕುಟುಂಬದಲ್ಲಿ ಯಾರಿಗೂ ಟಿಕೆಟ್‌ ನೀಡಬಾರದು ಎಂದು ಮಾಜಿ ಸಚಿವ ರೇಣುಕಾಚಾರ್ಯ, ಎಸ್.ಎ ರವೀಂದ್ರನಾಥ್, ಮಾಜಿ ಸಚಿವ ಕರುಣಾಕರ್ ರೆಡ್ಡಿ, ಮಾಜಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಮುಂತಾದವರು ಆಗ್ರಹ ಮಾಡಿದ್ದರು.. ಇದರ ನಡುವೆಯೇ ಹೈಕಮಾಂಡ್‌, ಸಂಸದ ಸಿದ್ದೇಶ್ವರ್‌ ಪತ್ನಿ ಗಾಯತ್ರಿ ಸಿದ್ದೇಶ್ವರ್‌ಗೆ ಟಿಕೆಟ್‌ ನೀಡಿದೆ.. ಇದರಿಂದಾಗಿ ದಾವಣಗೆರೆಯಲ್ಲಿ ಆಂತರಿಕ ಭಿನ್ನಮತ ಜೋರಾಗಿದೆ..

ಇನ್ನು ಅಸಮಾಧಾನಿತ ನಾಯಕರೆಲ್ಲಾ ದಾವಣಗೆರೆಯ ಮಾಜಿ ಮೇಯರ್‌ ಅಜಯ್‌ ಕುಮಾರ್‌ ನಿವಾಸದಲ್ಲಿ ಸೇರಿ ಸಭೆ ಕೂಡಾ ಮಾಡಿದ್ದಾರೆ.. ಅಭ್ಯರ್ಥಿ ಬದಲಿಸುವಂತೆಯೂ ಮನವಿ ಮಾಡಲಾಗಿದೆ.. ಅಭ್ಯರ್ಥಿ ಬದಲಾವಣೆ ಮಾಡದಿದ್ದರೆ, ದಾವಣಗೆರೆ ಶಕ್ತಿದೇವತೆ ದುಗ್ಗಮ್ಮ ಜಾತ್ರೆ ನಂತರ ನಾವು ನಿರ್ಧಾರ ಮಾಡ್ತೀವಿ ಅಂತಾನೂ ಹೇಳಿಕೊಂಡಿದ್ದಾರೆ.. ಇದೇ ವೇಳೆ ಮಾತನಾಡಿರುವ ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌,  ಜಿಎಂ ಸಿದ್ದೇಶ್ವರ್ ಕುಟುಂಬ ಬಿಟ್ಟು ಬೇರೆ ಯಾರಿಗೆ ಟಿಕೆಟ್ ಕೊಟ್ಟರೂ ನಾವು ಬೆಂಬಲಿಸುತ್ತೇವೆ.. ಅಭ್ಯರ್ಥಿ ಬೆಂಬಲಿಸದಿದ್ದರೆ ನಮ್ಮ ಬೆಂಬಲ ಇರುವುದಿಲ್ಲ ಎಂದು ಹೇಳಿಬಿಟ್ಟಿದ್ದಾರೆ. ಮಾಜಿ ಸಚಿವ ಕುರಣಾಕರರೆಡ್ಡಿ ಕೂಡಾ ಸಿದ್ದೇಶ್ವರ್‌ ಪತ್ನಿಗೆ ಟಿಕೆಟ್‌ ನೀಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; ಮಂಡ್ಯದಲ್ಲಿ‌‌ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್

ಬೆಂಗಳೂರು ಉತ್ತರದಲ್ಲೂ ಅಸಮಾಧಾನ;

ಇನ್ನು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಟಿಕೆಟ್‌ ನೀಡಲಾಗಿದೆ.. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಎರಡು ಬಾರಿ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆಗೆ ಈ ಬಾರಿ ಅಲ್ಲಿಂದ ಟಿಕೆಟ್‌ ಬೇಡ ಎಂಬ ಕೂಗು ಎದ್ದಿತ್ತು.. ಹೀಗಾಗಿ ಶೋಭಾ ಅವರನ್ನು ಬೆಂಗಳೂರು ಉತ್ತರಕ್ಕೆ ತಂದು ನಿಲ್ಲಿಸಲಾಗಿದೆ… ಉಡುಪಿ-ಚಿಕ್ಕಮಗಳೂರಿನಲ್ಲಿ ವಿರೋಧ ವ್ಯಕ್ತವಾದರೂ ಶೋಭಾ ಕರಂದ್ಲಾಜೆಗೆ ಬೇರೆ ಕ್ಷೇತ್ರದಲ್ಲಿ ಅವಕಾಶ ನೀಡಿದ್ದಕ್ಕೆ ಪಕ್ಷದಲ್ಲೇ ತೀವ್ರ ವಿರೋಧಗಳು ವ್ಯಕ್ತವಾಗುತ್ತಿವೆ.. ನಿಷ್ಠಾವಂತ ನಾಯಕರಿಗೆ ಟಿಕೆಟ್‌ ತಪ್ಪಿಸಿ ಶೋಭಾಗೆ ಟಿಕೆಟ್‌ ನೀಡಿರುವುದಕ್ಕೆ ವಿರೋಧಗಳು ವ್ಯಕ್ತವಾಗುತ್ತಿವೆ.. ಇಲ್ಲೂ ಕೂಡಾ ಶೋಭಾಗೆ ಒಳೇಟು ಬಿದ್ದರೂ ಆಶ್ಚರ್ಯವಿಲ್ಲ.

ಇದನ್ನೂ ಓದಿ; Bommai; ಪಕ್ಷ ಎಲ್ಲ ನಿಷ್ಠಾವಂತರಿಗೆ ಟಿಕೆಟ್ ಕೊಟ್ಟಿದೆ; ಬಸವರಾಜ ಬೊಮ್ಮಾಯಿ

ಬೆಳಗಾವಿಯಲ್ಲಿ ಶೆಟ್ಟರ್‌ಗೆ ಟಿಕೆಟ್‌ ಕೊಟ್ಟರೂ ಬಂಡಾಯ ಸಾಧ್ಯತೆ;

ಇನ್ನು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.. ಆದ್ರೆ ಇದಕ್ಕೆ ರಮೇಶ್‌ ಜಾರಕಿಹೊಳಿ ಸೇರಿ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.. ಕೊಟ್ಟರೆ ಸ್ಥಳೀಯರಿಗೆ ಟಿಕೆಟ್‌ ಕೊಡಿ.. ಇಲ್ಲದಿದ್ದರೆ ಬಿಜೆಪಿ ಫೈರ್‌ ಬ್ರಾಂಡ್‌ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಟಿಕೆಟ್‌ ಕೊಡಿ ಎಂದು ಕೇಳುತ್ತಿದ್ದಾರೆ.. ರಮೇಶ್‌ ಜಾರಕಿಹೊಳಿ ಅವರು ಯತ್ನಾಳ್‌ ಪರ ದೆಹಲಿಯಲ್ಲಿ ಲಾಬಿ ಶುರು ಮಾಡಿದ್ದಾರೆ.

ಇದಲ್ಲದೆ ಹಾವೇರಿ, ಕೊಪ್ಪಳ, ಬೀದರ್ ಕ್ಷೇತ್ರದ ಟಿಕೆಟ್‌ ವಿಚಾರದಲ್ಲೂ ಅಸಮಾಧಾನಗಳು ಹೊಗೆಯಾಡುತ್ತಿವೆ.. ಸ್ಥಳೀಯ ನಾಯಕರು ಆಕ್ಷೇಪ ಹೊರಹಾಕುತ್ತಿದ್ದಾರೆ.. ಇದು ಬಿಜೆಪಿ ನಾಯಕರಿಗೆ ತಲೆನೋವು ತರಿಸಿದೆ.. ಹೀಗೆ ಬರೋಬ್ಬರಿ ಅರ್ಧದಷ್ಟು ಕ್ಷೇತ್ರಗಳಲ್ಲಿ ಬಿಜೆಪಿಗೆ ಒಳೇಟು ಭೀತಿ ಇದೆ.. ಇದರ ಲಾಭ ಪಡೆಯೋದಕ್ಕೆ ಕಾಂಗ್ರೆಸ್‌ ಪಕ್ಷ ಸಾಕಷ್ಟು ತಂತ್ರಗಾರಿಕೆ ನಡೆಸುತ್ತಿದೆ.. ಆದ್ರೆ, ಇದಕ್ಕೆ ಬಿಜೆಪಿ ಹೈಕಮಾಂಡ್‌ ಏನು ಮಾಡುತ್ತೆ, ಭಿನ್ನಮತ ಶಮನಕ್ಕೆ ಏನೆಲ್ಲಾ ತಂತ್ರಗಾರಿಕೆ ಮಾಡುತ್ತೆ ನೋಡಬೇಕು..

Share Post