2022ರಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತ ಅರೆಸ್ಟ್; ಸೇಡಿನ ರಾಜಕಾರಣ ಆರೋಪ!
ಮಂಡ್ಯ; ರಾಜ್ಯಸಭಾ ಚುನಾವಣೆ ಫಲಿತಾಂಶದ ದಿನ ವಿಧಾನಸೌಧದಲ್ಲಿ ಕಾಂಗ್ರೆಸ್ ವಿಜೇತ ಅಭ್ಯರ್ಥಿ ನಾಸೀರ್ ಹುಸೇನ್ ಬೆಂಬಲಿಗರಲ್ಲಿ ಕೆಲವರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕಳೆದ ರಾತ್ರಿ ಮೂವರನ್ನು ಬಂಧಿಸಲಾಗಿದೆ. ಬಿಜೆಪಿ ನಾಯಕರು ತೀವ್ರ ಒತ್ತಡೆ ಹೇರಿದ್ದರಿಂದಾಗಿ ನಿನ್ನೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಹೀಗಿರುವಾಗಲೇ ಸರ್ಕಾರ ಇಂತಹದ್ದೇ ಮತ್ತೊಂದು ಹಳೆಯ ಪ್ರಕರಣವನ್ನು ಕೈಗೆತ್ತಿಕೊಂಡಿದೆ. 2022ರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಲಾಗಿದೆ. ಮಂಡ್ಯ ಪಶ್ಚಿಮ ಠಾಣೆ ಪೊಲೀಸರು, ಬಿಜೆಪಿ ಕಾರ್ಯಕರ್ತ ರವಿಯನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ಪಕ್ಷ ಬೇಕಂತಲೇ ಹಳೇ ಕೇಸ್ ಸಂಬಂಧ ರವಿಯನ್ನು ಬಂಧಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಇದನ್ನೂ ಓದಿ; ಬೆಂಗಳೂರು ಸೇರಿ 7 ರಾಜ್ಯಗಳಲ್ಲಿ NIA ದಾಳಿ; ತೀವ್ರ ತನಿಖೆ
2022ರಲ್ಲಿ ಮಂಡ್ಯದಲ್ಲಿ ನಡೆದಿದ್ದೇನು..?;
2022ರಲ್ಲಿ ಮಂಡ್ಯದಲ್ಲಿ ನಡೆದಿದ್ದೇನು..?; ಪಾಕಿಸ್ತಾನ ವಿದೇಶಾಂಗ ಸಚಿವರೊಬ್ಬರು ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. 2022ರ ಡಿಸೆಂಬರ್ 22ರಂದು ಮಂಡ್ಯದ ಸಂಜಯ್ ಸರ್ಕಲ್ ನಲ್ಲಿ ಕೂಡಾ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಾಕಾರರು, ಪಾಕಿಸ್ತಾನ ಮುರ್ದಾಬಾದ್, ಹಿಂದೂಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಇದೇ ವೇಳೆ ಬಾಯಿತಪ್ಪಿಯೋ ಏನೋ ಬಿಜೆಪಿ ಕಾರ್ಯಕರ್ತ ರವಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರು. ಈಗ ಇದೇ ಕೇಸ್‌ಗೆ ಸಂಬಂಧಿಸಿದಂತೆ ರವಿ ಯವರನ್ನು ಬಂಧಿಸಲಾಗಿದೆ.
ಎರಡು ವರ್ಷದ ನಂತರ ಕಾಂಗ್ರೆಸ್‌ನಿಂದ ದೂರು!;
ಎರಡು ವರ್ಷದ ನಂತರ ಕಾಂಗ್ರೆಸ್‌ನಿಂದ ದೂರು!; ಈ ಘಟನೆ ನಡೆದು ಎರಡು ವರ್ಷವಾಗಿತ್ತು. ಆದ್ರೆ, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ಕೇಳಿಬಂದ ಬೆನ್ನಲ್ಲೇ ಎರಡು ವರ್ಷದ ನಂತರ ಮಂಡ್ಯದಲ್ಲಿ ನಡೆದ ಘಟನೆ ಸಂಬಂಧ ಕಾಂಗ್ರೆಸ್ ದೂರು ನೀಡಿದೆ. ಕಾಂಗ್ರೆಸ್ ಕಾರ್ಯಕರ್ತ ಹನಿಂಬಾಡಿ ಕುಮಾರ್ ಎಂಬಾತ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಎ1 ಆರಾಧ್ಯ, ಎ2 ರವಿ ಎಂದು ಎಫ್‌ಐಆರ್ ಮಾಡಲಾಗಿದೆ. ಪ್ರತಿಭಟನೆ ಮಾಡಿದ್ದ ಮತ್ತಿತರರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಜೊತೆಗೆ ಬಿಜೆಪಿ ಕಾರ್ಯಕರ್ತ ಡಣಾಯಕನಪುರ ರವಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಪ್ರತಿಭಟನಾ ಸ್ಥಳದಲ್ಲಿಯೇ ಕ್ಷಮೆ ಕೇಳಿದ್ದ ರವಿ;
ಪ್ರತಿಭಟನಾ ಸ್ಥಳದಲ್ಲಿಯೇ ಕ್ಷಮೆ ಕೇಳಿದ್ದ ರವಿ; ಇನ್ನು ಪ್ರತಿಭಟನೆ ದಿನವೇ ರವಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದಾಗ ಪ್ರತಿಭಟನಾಕಾರರಲ್ಲಿ ಒಬ್ಬರು ಅವರ ಬಾಯಿ ಮುಚ್ಚಿಸಿದ್ದರು. ನಂತರ ರವಿ ನಾನು ಬಾಯಿ ತಪ್ಪಿ ಹಾಗೆ ಹೇಳಿದ್ದೇನೆ. ನಾನು ರೈತ ನನಗೆ ಹಿಂದಿ ಅರ್ಥವಾಗೋದಿಲ್ಲ. ಹೀಗಾಗಿ ಬಾಯಿ ಜಾರಿ ಹಾಗೆ ಹೇಳಿದ್ದೇನೆ. ನಾನು ಮೋದಿ ಭಕ್ತ ಎಂದು ಹೇಳಿ ಕ್ಷಮೆ ಕೂಡಾ ಕೇಳಿದ್ದರು. ಹೀಗಾಗಿ ಈ ಪ್ರಕರಣ ಅಲ್ಲಿಗೇ ಮುಕ್ತಾಯವಾಗಿತ್ತು. ಇದೀಗ ಕಾಂಗ್ರೆಸ್ ಕಾರ್ಯಕರ್ತ ನೀಡಿದ ದೂರಿನ ಹಿನ್ನೆಲೆಯಲ್ಲಿ ಎರಡು ವರ್ಷದ ಹಿಂದಿನ ಪ್ರಕರಣ ಮತ್ತೆ ಚಾಲ್ತಿಗೆ ಬಂದಿದೆ.
ಇದನ್ನೂ ಓದಿ; Oral hygiene; ಟೂತ್ ಬ್ರಷ್ ಎಷ್ಟು ದಿನಕ್ಕೊಮ್ಮೆ ಬದಲಿಸಬೇಕು?; ಬದಲಿಸದಿದ್ದರೆ ಏನಾಗುತ್ತೆ..?
ರಾಜ್ಯಸಭಾ ಚುನಾವಣೆ ವೇಳೆ ಪಾಕ್ ಪರ ಘೋಷಣೆ ಆರೋಪ;
ರಾಜ್ಯಸಭಾ ಚುನಾವಣೆ ವೇಳೆ ಪಾಕ್ ಪರ ಘೋಷಣೆ ಆರೋಪ; ವಾರದ ಹಿಂದೆ ರಾಜ್ಯದಿಂದ ಆಯ್ಕೆಯಾಗುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಅದರಲ್ಲಿ ನಾಸೀರ್ ಹುಸೇನ್ ಕೂಡಾ ಒಬ್ಬರು. ಅವರಿಗೆ ಅಭಿನಂದನೆ ಸಲ್ಲಿಸಲು ವಿಧಾನಸೌಧಕ್ಕೆ ಬಂದಿದ್ದ ಅವರ ಬೆಂಬಲಿಗರು ಘೋಷಣೆ ಕೂಗಿದ್ದರು. ಈ ವೇಳೆ ಕೆಲವರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಈ ಸಂಬಂಧ ಅದರ ವಿಡಿಯೋವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಅದರ ವರದಿ ಬಂದಿದ್ದರೂ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂದು ಬಿಜೆಪಿ ಆರೋಪ ಮಾಡಿತ್ತು. ಜೊತೆಗೆ ಬಿಜೆಪಿ ನಾಯಕರು ತಾವೇ ಮಾಡಿಸಿದ ಖಾಸಗಿ ಎಫ್‌ಎಸ್‌ಎಲ್ ವರದಿ ರಿಲೀಸ್ ಮಾಡಿದ್ದರು. ಈ ಬೆನ್ನಲ್ಲೇ ಮೂವರು ಆರೋಪಿಗಳನ್ನು ಕಳೆದ ರಾತ್ರಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಮೂವರು ಅರೆಸ್ಟ್ ಆಗುತ್ತಿದ್ದಂತೆ, ಎರಡು ವರ್ಷದ ಹಿಂದಿನ ಪ್ರಕರಣಕ್ಕೂ ಜೀವ ತುಂಬಲಾಗಿದೆ. ಹೀಗಾಗಿ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತ ನೀಡಿರುವ ದೂರು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ; ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ