ಕೃಷಿ ಬಳಕೆಯ ವಿದ್ಯುತ್ ದರದಲ್ಲಿ ಶೇ.50ರಷ್ಟು ಇಳಿಕೆ – ಉತ್ತರ ಪ್ರದೇಶ
ಲಖ್ನೌ : ಉತ್ತರ ಪ್ರದೇಶದ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಕೃಷಿ ಬಳಕೆ ವಿದ್ಯುತ್ ದರದಲ್ಲಿ ಶೇ.50ರಷ್ಟು ಕಡಿತ ಮಾಡಿದೆ. ಈ ಮಹತ್ವದ ನಿರ್ಧಾರದಿಂದ ೧೩ ಲಕ್ಷಕ್ಕೂ ಹೆಚ್ಚು ಬಳಕೆದಾರರಿಗೆ ಉಪಯೋಗವಾಗಲಿದೆ ಎಂದು ಸರ್ಕಾರ ತಿಳಿಸಿದೆ. ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳಿಗೆ ಇದರಿಂದ ಉಪಯೋಗವಾಗಲಿದೆ.
ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರೈತರನ್ನು ಬಿಜೆಪಿಯತ್ತ ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗ್ತಿದೆ.
ಗ್ರಾಹಕರನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ಮೀಟರ್,ಮೀಟರ್ ಇಲ್ಲದ, ಇಂಧನ ದಕ್ಷತೆಯುಳ್ಳ ಪಂಪ್‌ಗಳು ಮತ್ತು ಮೀಟರ್ ಸಹಿತ ವಿದ್ಯುತ್ ಪಡೆಯುವ ನಗರ ಪ್ರದೇಶದ ರೈತರು ಎಂದು ವಿಂಗಡಿಸಲಾಗಿದೆ. ಇದರ ಆಧಾರದ ಮೇಲೆ ದರ ಕಡಿತದ ಯೋಜನೆಗಳನ್ನು ಪ್ರಕಟಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯಿಂದ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.