Crying; ಮನುಷ್ಯ ವಾರಕ್ಕೊಮ್ಮೆ ಅಳಬೇಕಂತೆ; ಅಳೋದೂ ಒಂದು ಆರೋಗ್ಯ ಸೂತ್ರ!
ನವದೆಹಲಿ; ನಾವು ಆರೋಗ್ಯ ಕಾಪಾಡಿಕೊಳ್ಳಲು ನಾನಾ ಕಸರತ್ತು ಮಾಡುತ್ತೇವೆ. ಜಾಗಿಂಗ್, ವಾಕಿಂಗ್, ಜಿಮ್, ವ್ಯಾಯಾಮ ಎಲ್ಲಾ ಮಾಡುತ್ತೇವೆ. ಇದರ ಜೊತೆ ವಾರಕ್ಕೊಮ್ಮೆ ಅತ್ತರೆ ಆರೋಗ್ಯ ಮತ್ತಷ್ಟು ಚೆನ್ನಾಗಿರುತ್ತದೆ ಅಂತಿದ್ದಾರೆ ತಜ್ಞರು. ಕೆಲ ವರ್ಷಗಳಿಂದ ದಿನಾ ಪಾರ್ಕ್‌ಗಳಲ್ಲಿ ನಗುವವರು ಕಾಣಿಸುತ್ತಿದ್ದರು. ಅದಕ್ಕಾಗಿ ಲಾಫಿಂಗ್ ಕ್ಲಬ್‌ಗಳೇ ಇವೆ. ಇದೀಗ ವೈದ್ಯರು ಅಳುವುದನ್ನು ಕಲಿತುಕೊಳ್ಳಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕ್ರೈಯಿಂಗ್ ಕ್ಲಬ್‌ಗಳು ಕೂಡಾ ಶುರುವಾಗಬಹುದು.
ಅಳುವುದರಿಂದ ಮನಸ್ಸಿನಲ್ಲಿ ದುಃಖ ಹೊರಗೆ ಬರುತ್ತದೆ. ಇದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಮಾನಸಿಕವಾಗಿ ನೋವು ಅನುಭವಿಸುತ್ತಿರುವವರು ಅಳೋದಕ್ಕೆ ಶುರು ಮಾಡಿದರೆ ಅಕ್ಕಪಕ್ಕ ಇರುವವರು ಸ್ವಲ್ಪ ಹೊತ್ತು ಮನಸು ಹಗುರಾಗಿಸಿಕೊಳ್ಳಲಿ ಬಿಡಿ ಎಂದು ಹಾಗೆಯೇ ಬಿಡುವುದನ್ನು ನಾವು ನೋಡಿದ್ದೇವೆ. ಇಲ್ಲದಿದ್ದರೆ, ಅವರೇ ಹೇಳಿಬಿಡುತ್ತಾರೆ ಎಷ್ಟು ಬೇಕೋ ಅಷ್ಟು ಅತ್ತುಬಿಡು ಎಂದು. ಅತ್ತರೆ ಮನಸು ಹಗುವಾಗುತ್ತದೆ ಎಂಬುದು ನಮಗೆ ಮೊದಲಿನಿಂದಲೂ ಗೊತ್ತಿದೆ. ಇದೀಗ ತಜ್ಞರು ಕೂಡಾ ಇದನ್ನೇ ಹೇಳುತ್ತಿದ್ದಾರೆ.
ತಜ್ಞರು ಹೇಳುವ ಪ್ರಕಾರ ವಾರಕ್ಕೊಮ್ಮೆ ಅತ್ತರೆ ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳಿವೆಯಂತೆ. cryonceaweek.com ಎಂಬ ವೆಬ್‌ಸೈಟ್‌ಗೆ ಭೇಟಿ ನೀಡಿದರೆ, ನಿಮ್ಮನ್ನು ಆ ವೆಬ್‌ಸೈಟ್ ಅಳಿಸುತ್ತದೆ. ಅಳಬೇಕು ಎಂದಾಗ ಇಲ್ಲಿಗೆ ಹೋಗಿ ಎಷ್ಟು ಬೇಕೋ ಅಷ್ಟು ಅತ್ತುಬಿಡಬಹುದು. ತಜ್ಞರು ಹೇಳುವ ಪ್ರಕಾರ ನಗುವುದಕ್ಕಿಂತ ಅಳುವುದರಿಂದ ಒತ್ತಡ ಸುಲಭವಾಗಿ ನಿವಾರಣೆಯಾಗುತ್ತದಂತೆ. ದೀರ್ಘಾವಧಿಯ ನೋವಿಗೂ ಅಳು ಪರಿಹಾರವಂತೆ.