National

ನಾವೆಲ್ಲ ಒಂದಾಗುವ ಸಮಯ ಬಂದಿದೆ: ಬಿಜೆಪಿಯೇತರ ರಾಜ್ಯದ ಸಿಎಂಗಳಿಗೆ ದೀದಿ ಪತ್ರ

ಪಶ್ಚಿಮ ಬಂಗಾಳ:  ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ವಿರೋಧಿ ಮೈತ್ರಿ ಮುರಿದು ಬಿದ್ದಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅಂಥದ್ದೇನೂ ಇಲ್ಲ ಎಂಬುದನ್ನು ಸಾಬೀತು ಮಾಡಲು ಮಮತಾ ಬ್ಯಾನರ್ಜಿ ಸಂದೇಶ ರವಾನೆ ಮಾಡಿದ್ದಾರೆ. ಭಾರತದ ಎಲ್ಲಾ ಬಿಜೆಪಿ ವಿರೋಧಿ ಪಕ್ಷಗಳು ಮತ್ತು ಬಿಜೆಪಿಯೇತರ ಮುಖ್ಯಮಂತ್ರಿಗಳು ಒಗ್ಗೂಡಿ ಬಿಜೆಪಿ ವಿರುದ್ಧ ಹೋರಾಡುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ.

ಅದರ ಭಾಗವಾಗಿ, ಮಾರ್ಚ್ 29, 2022 ರಂದು ಮಂಗಳವಾರ ವಿವಿಧ ರಾಜ್ಯಗಳ ಬಿಜೆಪಿಯೇತರ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷಗಳ ನಾಯಕರಿಗೆ ಪತ್ರ ಬರೆದಿದ್ದಾರೆ. ಬಿಜೆಪಿಯನ್ನು ಎದುರಿಸಲು ಕೈ ಜೋಡಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬಿಜೆಪಿ ವಿರುದ್ಧ ಎಲ್ಲಾ ಪಕ್ಷಗಳು ಹೋರಾಡಬೇಕು ಎಂದು ದೀದಿ ಕರೆ ನೀಡಿದರು. ಕೇಂದ್ರ ಸರ್ಕಾರ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ. ಕೇಂದ್ರೀಯ ಸಂಸ್ಥೆಗಳನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪ್ರತಿಪಕ್ಷಗಳನ್ನು ಹತ್ತಿಕ್ಕಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಬಿಜೆಪಿಯೇತರ ಪಕ್ಷಗಳು ಒಗ್ಗೂಡುವ ಸಮಯ ಬಂದಿದ್ದು, ಆ ನಿಟ್ಟಿನಲ್ಲಿ ಬಿಜೆಪಿಯೇತರ ಪಕ್ಷಗಳು ಸಭೆ ನಡೆಸಬೇಕೆಂದರು.  ಪ್ರತಿಪಕ್ಷಗಳ ಒಗ್ಗಟ್ಟು ದೇಶವನ್ನು ಉಳಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಬಿಜೆಪಿ ಪ್ರಜಾಪ್ರಭುತ್ವದ ಮೇಲೆ ನೇರವಾಗಿ ದಾಳಿ ನಡೆಸುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಸರ್ಕಾರ ತನಿಖಾ ಸಂಸ್ಥೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಮತ್ತು ಚುನಾವಣೆಗೆ ಮುನ್ನ ರಾಜಕೀಯದಲ್ಲಿ ತನ್ನ ವಿರೋಧಿಗಳ ಮೇಲೆ ದಾಳಿ ನಡೆಸುತ್ತಿದೆ ಎಂದರು. ಇದೀಗ ಒಗ್ಗಟ್ಟಿನ ಮಂತ್ರ ಪಠಿಸುವ ಸಮಯ ಬಂದಿದೆ. ಸೂಕ್ತ ಸಮಯ, ಸ್ಥಳ ಗೊತ್ತು ಮಾಡಿದ್ರೆ ಒಮ್ಮೆ ಸಭೆ ನಡೆಸುವುದರ ಬಗ್ಗೆ ಬ್ಯಾನರ್ಜಿ ತಿಳಿಸಿದ್ದಾರೆ. ಸಾರ್ವಜನಿಕ ವಿರೋಧಿ ನೀತಿಗಳನ್ನು ಸಾರ್ವಜನಿಕವಾಗಿ ಕೊಂಡೊಯ್ಯುವುದು ಹೇಗೆ?.. ರಾಜಕೀಯ ಪಕ್ಷಗಳ ವಿರುದ್ಧ ಪಕ್ಷಪಾತ ಚಟುವಟಿಕೆಗಳಿಗೆ ಪೂರ್ಣವಿರಾಮ ಹಾಕುವುದು ಹೇಗೆ? 2024 ರ ಸಾರ್ವತ್ರಿಕ ಚುನಾವಣೆಗೆ ತಯಾರಿ ಹೇಗೆ? ಇನ್ನೆರಡು ತಿಂಗಳಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆ ಇದೆ. ವಿರೋಧಪಕ್ಷಗಳ ಅನುಮತಿ ಇಲ್ಲದೆ ಚುನಾವಣೆ ನಡೆಯುವುದು ಅಸಾಧ್ಯ ಎಂಬುದನ್ನು ಮಮತಾ ಈಗಾಗಲೇ ಹೇಳಿದ್ದಾರೆ.

ದೀದಿಗೂ ಮೊದಲು ಸ್ಟಾಲಿನ್ ಬಿಜೆಪಿ ವಿರೋಧಿ ಸಿಎಂ ಹಾಗೂ ನಾಯಕರ ಸಭೆಗೆ ಕರೆದಿದ್ದು ಗೊತ್ತೇ ಇದೆ. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಬಿಜೆಪಿ ವಿರೋಧಿ ಮೈತ್ರಿಗೆ ಪ್ರಯತ್ನ ನಡೆಸುತ್ತಿದ್ದಾರೆ. ಅವರು ಉದ್ಧವ್ ಠಾಕ್ರೆ, ಶರದ್ ಪವಾರ್, ಹೇಮಂತ್ ಸೊರೆನ್, ಸುಬ್ರಹ್ಮಣ್ಯ ಸ್ವಾಮಿ ಮತ್ತು ರೈತ ಸಂಘಗಳ ಮುಖಂಡರನ್ನು ಈಗಾಗಲೇ ಭೇಟಿ ಮಾಡಿದ್ದಾರೆ. ಮಮತಾ ಕರೆಗೆ ಇತರೆ ನಾಯಕರ ಪ್ರತಿಕ್ರಿಯೆ ಏನು? ಎಷ್ಟು ಮಂದಿ ಪಾಲ್ಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Share Post