ಶಿಮ್ಲಾದಲ್ಲಿ ಭಾರಿ ಹಿಮಪಾತ: ಹಿಮಾಚಲದ 5 ಜಿಲ್ಲೆ ಜನ ತತ್ತರ
ಶಿಮ್ಲಾ: ಹಿಮಾಚಲ ಪ್ರದೇಶದ ಐದು ಜಿಲ್ಲೆಗಳಲ್ಲಿ ಭಾರೀ ಹಿಮಪಾತವಾಗುತ್ತಿದೆ. ವಾಹನಗಳ ಓಡಾಟಕ್ಕೂ ಕಷ್ಟವಾಗುತ್ತಿದೆ. ರಸ್ತೆಗಳಲ್ಲಿ ಹಿಮ ಹೆಚ್ಚಾಗಿರುವುದರಿಂದ ವಾಹನಗಳ ಚಕ್ರಗಳು ಜಾರುತ್ತಿವೆ. ಇದರಿಂದಾಗಿ, ಹಿಮಾಚಲ ಪ್ರದೇಶದ ಐದು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಶಿಮ್ಲಾ, ಕುಲು ಮನಾಲಿ, ಲಾಹೌಲ್ ಸ್ಪಿತಿ ಮತ್ತು ಚಂಬಾ ಮಂಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಹಿಮಪಾತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಭಾಗಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇನ್ನು ಸಾರಿಗೆ ಸಂಸ್ಥೆಯ 200 ಕ್ಕೂ ಹೆಚ್ಚು ಮಾರ್ಗಗಳಲ್ಲಿ ವಾಹನ ಓಡಾಟಕ್ಕೆ ತೊಂದರೆಯಾಗಿದೆ. ಹೀಗಾಗಿ ಈ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಇನ್ನು 80 ಟ್ರಾನ್ಸ್ ಫಾರ್ಮರ್ ಗಳು ಸಹ ಸ್ಥಗಿತಗೊಂಡಿವೆ.
ಮುಂದಿನ 24 ಗಂಟೆಗಳಲ್ಲಿ ಹಿಮಪಾತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಶಿಮ್ಲಾ, ಕುಲು ಮನಾಲಿ, ಲಾಹೌಲ್ ಸ್ಪಿತಿ ಮತ್ತು ಚಂಬಾ ಮಂಡಿ ಭಾಗಗಳಲ್ಲಿ ಹಿಮಪಾತ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಈ ಭಾಗದಲ್ಲಿ ಜನ ಓಡಾಡದಂತೆ ಎಚ್ಚರಿಕೆ ನೀಡಲಾಗಿದೆ.