ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಪರಿಸ್ಥಿತಿ ಉದ್ವಿಗ್ನ:ಭಯದಲ್ಲಿ ವಿದ್ಯಾರ್ಥಿಗಳು
ಉಕ್ರೇನ್: ರಷ್ಯಾ ಅಧ್ಯಕ್ಷ ಪುಟಿನ್ ಆದೇಶದಂತೆ ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಯುದ್ಧದ ಭೀತಿಯಲ್ಲಿದ್ದಾರೆ. ಕೀವ್ ಮತ್ತು ಖಾರ್ಕಿವ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ಭಾರತೀಯರು ವಾಸಿಸುತ್ತಿದ್ದಾರೆ. ಕೀವ್ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಯುದ್ಧದಿಂದಾಗಿ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ವಿಮಾನಗಳ ರದ್ದಾಗಿದ್ದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಅಲ್ಲಿನ ಪರಿಸ್ಥಿತಿ ಕಂಡು ವಿದ್ಯಾರ್ಥಿಗಳ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಬಗ್ಗೆ ಮುತುವರ್ಜಿ ವಹಿಸಿ ನಮ್ಮ ಮಕ್ಕಳನ್ನು ವಾಪಸ್ ಕರೆತನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಕೆಲವೆಡೆ ಪರಿಸ್ಥಿತಿ ತಿಳಿಯಾಗಿದ್ದರೂ ಯಾವಾಗ ಏನು ಆಗುತ್ತೋ ಎಂಬ ಭಯದಲ್ಲಿ ವಿದ್ಯಾರ್ಥಿಗಳ ಕಾಲ ಕಳೆಯುತ್ತಿದ್ದಾರೆ. ಇನ್ನೂ ಕೆಲವು ಕಡೆ ಈಗಾಗಲೇ, ಇಂಟರ್‌ನೆಟ್, ಹಣ, ಗ್ಯಾಸ್ ಕನೆಕ್ಷನ್, ನೀರು ಪೂರೈಕೆ ಕೂಡ ಸ್ಥಗಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳು ನೀರು, ದಿನಸಿ, ಹಣ್ಣು, ತರಕಾರಿಗಳನ್ನ ಸಂಗ್ರಹಿಸಿಕೊಂಡಿದ್ದೇವೆ ಅಂತಿದಾರೆ. ಆದ್ರೆ ಹೀಗೆ ಮುಂದುವರಿದರೆ ಬಹಳ ಕಷ್ಟವಾಗುತ್ತದೆ ಎಂಬ ಆತಂಕವನ್ನು ಕೂಡಾ ವ್ಯಕ್ತಪಡಿಸಿದ್ದಾರೆ. ರಾಯಭಾರ ಕಛೇರಿಯಿಂದ ಯಾರೂ ತಮ್ಮನ್ನು ಸಂಪರ್ಕಿಸುತ್ತಿಲ್ಲ ಕೆಲವು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ನಮ್ಮನ್ನು ಭಾರತಕ್ಕೆ ಕರೆತನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ.