ನಕ್ಸಲರಿಂದ ರೈಲು ಹಳಿ ಸ್ಫೋಟ; ತಪ್ಪಿತು ಭಾರಿ ಅನಾಹುತ
ಜಾರ್ಖಂಡ್: ರೈಲು ಹಳಿ ಸ್ಫೋಟಿಸಿ, ಭಾರಿ ದುಷ್ಕೃತ್ಯ ನಡೆಸಲು ನಕ್ಸಲರು ಸಂಚು ರೂಪಿಸಿದ್ದು, ಇದನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌರಾ – ಗಯಾ – ದೆಹಲಿ ಮಾರ್ಗವನ್ನು ಗುರಿಯಾಗಿಸಿಕೊಂಡು ಗಿರಿದಿಹ್ ಬಳಿ ನಕ್ಸರು ರೈಲು ಹಳಿ ಸ್ಫೋಟಿಸಿದ್ದಾರೆ. ಈ ವಿಷಯ ತಿಳಿದಿದ್ದರಿಂದಾಗಿ ಈ ಮಾರ್ಗದ ಎಲ್ಲಾ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ನಕ್ಸಲರ ದುಷ್ಕೃತ್ಯ ಗೊತ್ತಾಗಿದ್ದರಿಂದಾಗಿ ಹಲವು ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ. ಇನ್ನು ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ಹಾಗೂ ಗಂಗಾ ದಾಮೋದರ್ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಬುಧವಾರ ರಾತ್ರಿ 12.15ರ ಸುಮಾರಿಗೆ ಚಿಚಕಿ ಹಾಗೂ ಚೌಧರಿಬಂದ್ ನಿಲ್ದಾಣಗಳ ನಡುವೆ ಗಿರಿದಿಹ್ ಬಳಿ ನಕ್ಸಲರು ಹಳಿ ಸ್ಫೋಟಿಸಿದ್ದಾರೆ. ಅದೃಷ್ಟವಶಾತ್ ಅದಾದ ನಂತರ ಯಾವುದೇ ರೈಲುಗಳು ಈ ಮಾರ್ಗದಲ್ಲಿ ಸಂಚರಿಸಿಲ್ಲ.
ಸ್ಫೋಟದ ವಿಷಯ ತಿಳಿಯುತ್ತಿದ್ದಂತೆ ಹೌರಾ-ನವದೆಹಲಿ ಮಾರ್ಗವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಹಳಿಗಳ ಮರುಜೋಡಣೆ ಕೆಲಸ ನಡೆಯುತ್ತಿದೆ.