CrimeNationalPolitics

ಜೈಲು ಶಿಕ್ಷೆಗೆ ತಡೆ ಕೋರಿ ಅರ್ಜಿ; ರಾಹುಲ್‌ ಗಾಂಧಿ ಕೇಸ್‌ ಆ.4ಕ್ಕೆ ಮುಂದೂಡಿಕೆ

ನವದೆಹಲಿ; ಮೋದಿ ಉಪನಾಮವನ್ನು ಅವಹೇಳನ ಮಾಡಿದ ಪ್ರಕರಣ ಸಂಬಂಧ ಸೂರತ್‌ ಕೋರ್ಟ್‌ ವಿಧಿಸಿದ್ದ ಜೈಲು ಶಿಕ್ಷೆ ಪ್ರಶ್ನಿಸಿ ರಾಹುಲ್‌ ಗಾಂಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಆಗಸ್ಟ್‌ 4ಕ್ಕೆ ಮುಂದೂಡಲಾಗಿದೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೋಲಾರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಭಾಷಣ ಮಾಡುತ್ತಾ, ಮೋದಿ ಉಪನಾಮ ಇರುವವರೆಲ್ಲಾ ಕಳ್ಳರೇ ಎಂಬ ರೀತಿಯಲ್ಲಿ ಮಾತನಾಡಿದ್ದರು. ಹೀಗಾಗಿ, ನಮಗೆ ಮಾನನಷ್ಟವಾಗಿದೆ ಎಂದು ಮೋದಿ ಉಪನಾಮವಿರುವ ಸೂರತ್‌ನ ಬಿಜೆಪಿ ಶಾಸಕರೊಬ್ಬರು ಸೂರತ್‌ ಕೋರ್ಟ್‌ನಲ್ಲಿ ಕೇಸ್‌ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್‌, ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಹೈಕೋರ್ಟ್‌ ಕೂಡಾ ಈ ತೀರ್ಪು ಎತ್ತಿಹಿಡಿದಿತ್ತು.

ಎರಡು ವರ್ಷ ಹಾಗೂ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಯಾದವರಿಗೆ ಜನಪ್ರತಿನಿಧಿಯಾಗಿ ಇರೋದಕ್ಕೆ ಆಗೋದಿಲ್ಲ. ಜೊತೆಗೆ ಆರು ವರ್ಷಗಳ ಕಾಲ ಚುನಾವಣೆಗೂ ನಿಲ್ಲುವಂತಿಲ್ಲ. ಈ ಕಾನೂನಿನಡಿಯಲ್ಲೇ ರಾಹುಲ್‌ ಗಾಂಧಿ ಸಂಸತ್‌ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಸುಪ್ರೀಂಕೋರ್ಟ್‌ ಇವರ ಮನವಿಯನ್ನು ಪರಿಗಣಿಸಿ, ಅಧೀನ ಕೋರ್ಟ್‌ ನೀಡಿರುವ ತೀರ್ಪಿಗೆ ತಡೆ ನೀಡಿದರೆ ಮಾತ್ರ ರಾಹುಲ್‌ಗೆ ಸಂಸತ್‌ ಸದಸ್ಯತ್ವ ವಾಪಸ್‌ ಬರುತ್ತದೆ. ಜೊತೆಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶವಿರುತ್ತದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ಮೇಲೆ ರಾಹುಲ್‌ ಗಾಂಧಿಯವರ ರಾಜಕೀಯ ಭವಿಷ್ಯ ನಿಂತಿದೆ.

Share Post