NationalPolitics

ತೆಲಂಗಾಣ ಗೆಲುವಿನಲ್ಲಿ ಭಾರತ್‌ ಜೋಡೋ ಯಾತ್ರೆಯ ಪ್ರಭಾವವೆಷ್ಟು..?

ಹೈದರಾಬಾದ್‌; ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವಿನಲ್ಲಿ ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆ ಸಾಕಷ್ಟು ಪ್ರಭಾವ ಬೀರಿತ್ತು. ರಾಹುಲ್‌ ಗಾಂಧಿ ಪಾದಯಾತ್ರೆ ಮಾಡಿದ ಪ್ರದೇಶಗಳಲ್ಲಿ ಕಾಂಗ್ರೆಸ್‌ ಅತಿಹೆಚ್ಚಿನ ಸೀಟು ಗಳಿಸಿತ್ತು. ರಾಹುಲ್‌ ಗಾಂಧಿಯವರು ತೆಲಂಗಾಣದಲ್ಲಿ ಕೂಡಾ ಪದಾಯಾತ್ರೆ ಮಾಡಿದ್ದರು. 2022ರ ಅಕ್ಟೋಬರ್ 23 ರಿಂದ ನವೆಂಬರ್ 7ರವರೆಗೆ ರಾಹುಲ್‌ ಗಾಂಧಿ ತೆಲಂಗಾಣದಲ್ಲಿ ಪಾದಯಾತ್ರೆ ಮಾಡಿದ್ದರು. 375 ಕಿಲೋಮೀಟರ್ ಪಾದಯಾತ್ರೆ ಇದಾಗಿತ್ತು. 

ಮಧ್ಯ 3 ದಿನ ದೀಪಾವಳ ಹಬ್ಬಕ್ಕೆ ಬ್ರೇಕ್‌ ತೆಗೆದುಕೊಂಡಿದ್ದರಿಂದ ತೆಲಂಗಾಣದಲ್ಲಿ ಒಟ್ಟು 12 ದಿನ ರಾಹುಲ್‌ ಗಾಂಧಿ ಪಾದಯಾತ್ರೆ ನಡೆಸಿದ್ದರು. ಈ ವೇಳೆ ಅವರು ಹಾದುಹೋದ ವಿಧಾನಸಭಾ ಕ್ಷೇತ್ರಗಳಲ್ಲಿ ಎಷ್ಟು ಕ್ಷೇತ್ರಗಳು ಕಾಂಗ್ರೆಸ್‌ಗೆ ದಕ್ಕಿವೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಅದರ ವಿವರ ನೋಡೋಣ.

ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಭಾರಿಸಿದೆ. 119 ಕ್ಷೇತ್ರಗಳ ವಿಧಾನಸಭೆಯಲ್ಲಿ ಕಾಂಗ್ರೆಸ್‌ 64 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಇಂದು ರೇವಂತ್‌ ರೆಡ್ಡಿ ಸಿಎಂ ಆಗಿ ಪ್ರಮಾಣವಚನ ಕೂಡಾ ಸ್ವೀಕಾರ ಮಾಡುತ್ತಿದ್ದಾರೆ. ಈ ಗೆಲುವಿನಲ್ಲಿ ಭಾರತ್‌ ಜೋಡೋ ಯಾತ್ರೆ ಎಷ್ಟು ಪ್ರಭಾವ ಬೀರಿದೆ ಅನ್ನೋದು ಎಲ್ಲರ ಕುತೂಹಲ.

ಅಂದಹಾಗೆ, ರಾಹುಲ್‌ ಗಾಂಧಿಯವರು 12 ದಿನಗಳಲ್ಲಿ ತೆಲಂಗಾಣದ 17 ವಿಧಾನಸಭಾ ಕ್ಷೇತ್ರಗಳಲ್ಲಿ 375 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದರು. ಈ 17 ಕ್ಷೇತ್ರಗಳಲ್ಲಿ ಪೈಕಿ ಕಾಂಗ್ರೆಸ್‌ 8 ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್‌ ಗೆದ್ದಿದೆ. ಉಳಿದ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋತಿದೆ. ನಾಂಪಲ್ಲಿ, ಪಟಾನ್ ಚೆರುವು, ಸೆರಿಲಿಂಗಂಪಲ್ಲಿ, ಸಂಗಾರೆಡ್ಡಿ, ಕುಕಟ್ಪಲ್ಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಎರಡನೇ ಸ್ಥಾನ ಪಡೆದರೆ, ರಾಜೇಂದ್ರನಗರ, ಬಹದ್ದೂರ್ ಪುರ, ಚಾರ್ಮಿನಾರ್, ಗೋಶಾಮಹಲ್  ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಈ ಅಂಕಿ-ಅಂಶಗಳನ್ನು ನೋಡಿದರೆ ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆ ಫಲಿತಾಂಶದ ಮೇಲೆ ಅಷ್ಟೇನೂ ಪ್ರಭಾವ ಬೀರಿಲ್ಲ ಎನಿಸುತ್ತದೆ. ಆದ್ರೆ, ಪಾದಯಾತ್ರೆ ಪ್ರವೇಶಿದ ವಿಧಾನಸಭಾ ಕ್ಷೇತ್ರಗಳ ಬದಲು, ಜಿಲ್ಲಾವಾರು ಫಲಿತಾಂಶ ನೋಡಿದರೆ, ಭಾರತ್‌ ಜೋಡೋ ಸಾಕಷ್ಟು ಪ್ರಭಾವ ಬೀರಿರುವುದು ಕಂಡುಬರುತ್ತದೆ.  ತೆಲಂಗಾಣದಲ್ಲಿ, ಭಾರತ್ ಜೋಡೋ ಯಾತ್ರೆ ಪ್ರವೇಶಿಸಿದ ಜಂಟಿ ಮಹೆಬೂಬ್‌ನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಆ ಜಿಲ್ಲೆಯ 14 ಸ್ಥಾನಗಳ ಪೈಕಿ 12 ಸ್ಥಾನಗಳು ಕಾಂಗ್ರೆಸ್‌ಗೆ ದಕ್ಕಿವೆ.  ಆದ್ರೆ ಹೈದರಾಬಾದ್  ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸೋಲಾಗಿದೆ.

Share Post