National

ಡಿ.ಕೆ.ಶಿವಕುಮಾರ್‌ ಜಾಮೀನು ಅರ್ಜಿ; ಇಂದು ಆದೇಶ ಪ್ರಕಟ

ನವದೆಹಲಿ; ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಇತರೆ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯ ತೀರ್ಪು ಇಂದು ಪ್ರಕಟವಾಗಲಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿಯ ಜಾರಿ ನಿರ್ದೇಶನಾಲಯ (ಇಡಿ) ವಿಶೇಷ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು. ಇಂದು ಮಧ್ಯಾಹ್ನ 3 ಗಂಟೆಗೆ ಈ ಆದೇಶವನ್ನು ಕೋರ್ಟ್ ಪ್ರಕಟಿಸಲಿದೆ. ಪ್ರಕರಣದ ತನಿಖೆ ನಡೆಸಿದ್ದ ಇಡಿ ನ್ಯಾಯಾಲಯಕ್ಕೆ ಜಾರ್ಜ್‍ಶೀಟ್ ಸಲ್ಲಿಸಿತ್ತು. ಈ ಹಿನ್ನೆಲೆ ಡಿ.ಕೆ ಶಿವಕುಮಾರ್ ತಮ್ಮ ಮಧ್ಯಂತರ ಜಾಮೀನನ್ನು ಸಾಮಾನ್ಯ ಜಾಮೀನಿಗೆ ಪರಿಗಣಿಸಲು ಮನವಿ ಮಾಡಿದರು. ಮತ್ತು ಪ್ರಕರಣ ಇತರೆ ಆರೋಪಿಗೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು.

ಕಳೆದ ಶನಿವಾರ ಈ ಎಲ್ಲ ಅರ್ಜಿಗಳನ್ನು ನ್ಯಾ. ವಿಕಾಸ್ ದುಲ್ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಜಾಮೀನು ನೀಡದಂತೆ ಇಡಿ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಡಿಕೆ ಶಿವಕುಮಾರ್ ಪರ ವಕೀಲರು, ಹೈಕೋರ್ಟ್ ನೀಡಿದ ಜಾಮೀನಿನ ಆಧಾರದ ಮೇಲೆ ಮುಂದುವರಿಸಬೇಕು ಎಂದು ಮನವಿ ಮಾಡಿದರು. ಇತರೆ ನಾಲ್ಕು ಆರೋಪಿಗಳ ಪರ ವಾದ ಮಂಡಿಸಿದ್ದ ವಕೀಲರು, ಇಡಿ ಜಾಮೀನು ನೀಡಲು ವಿರೋಧಿಸುವುದಕ್ಕೆ ಅರ್ಥವಿಲ್ಲ. ಯಾವ ಆಧಾರದಲ್ಲಿ ಇಡಿ ಜಾಮೀನು ವಿರೋಧಿಸುತ್ತಿದೆಯೋ ಗೊತ್ತಿಲ್ಲ. ಎಲ್ಲ ಅಂಶಗಳು ಮೇಲ್ಮಟ್ಟದ ನ್ಯಾಯಾಲಯಗಳಲ್ಲಿ ಚರ್ಚೆಯಾಗಿದೆ.

ಹಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿದ ಹಲವು ಉದಾಹರಣೆಗಳು ಇವೆ. ಇಡಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ಇನ್ನು ಆರೋಪಿಗಳನ್ನ ಬಂಧಿಸುವ ಅಗತ್ಯವೇ ಬರುವುದಿಲ್ಲ. ಇಡಿ ತನಿಖೆಯ ವೇಳೆ ಆರೋಪಿಗಳನ್ನು ಬಂಧಿಸಿಲ್ಲ. ಹೀಗಾಗಿ ಜಾರ್ಜ್ ಶೀಟ್ ಸಲ್ಲಿಕೆ ಬಳಿಕ ಜಾಮೀನು ಪಡೆಯಲು ವಿರೋಧಿಸುವಂತಿಲ್ಲ ಅಂತಾ ವಾದಿಸಿದ್ದರು.

Share Post