ರೋಗಿಗಳ ಮೇಲೆ ಇಲಿಗಳ ದಾಳಿ; ವರಂಗಲ್ ಆಸ್ಪತ್ರೆಯಲ್ಲಿ ದಾರುಣ ಸ್ಥಿತಿ
ವರಂಗಲ್: ಆಂಧ್ರಪ್ರದೇಶದ ವರಂಗಲ್‌ನ MGM ಆಸ್ಪತ್ರೆಯಲ್ಲಿ ಇಲಿ ಕಾಟ ಜೋರಾಗಿದೆ. ಚಿಕಿತ್ಸೆಗೆಂದು ಬಂದ ರೋಗಿಗಳನ್ನು ಇಲಿಗಳು ಕಚ್ಚುತ್ತಿವೆ. ನಿನ್ನೆ ಚಿಕಿತ್ಸೆಗೆಂದು ಬಂದಿದ್ದ ರೋಗಿಯೊಬ್ಬನನ್ನು ಇಲಿಗಳು ಕಚ್ಚಿ ಗಾಯಗೊಳಿಸಿವೆ. ಇಲಿಗಳ ದಾಳಿಯಿಂದಾ ರೋಗಿಗೆ ತೀವ್ರ ರಕ್ತಸ್ರಾವವಾಗಿದೆ.
ಶ್ರೀನಿವಾಸ್ ಎಂಬ ವ್ಯಕ್ತಿ ನಾಲ್ಕು ದಿನಗಳ ಹಿಂದೆ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದ. ಮೊದಲ ದಿನವೇ ಆತನ ಬಲಗೈ ಬೆರಳುಗಳನ್ನು ಇಲಿಗಳು ಕಚ್ಚಿದ್ದವು. ಹನುಮಕೊಂಡ ಜಿಲ್ಲೆ ಭೀಮಾವರಂಗೆ ಸೇರಿದ ಶ್ರೀನಿವಾಸ್ ಶ್ವಾಸಕೋಶ ಹಾಗೂ ಕಿಡ್ನಿ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಪ್ರೈವೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀನಿವಾಸ್ ಉಸಿರಾಟದ ತೊಂದರೆಯಿಂದ ಸಂಕಷ್ಟದಲ್ಲಿದ್ದರು. ಹೀಗಾಗಿ, ಕೂಡಲೇ ವರಂಗಲ್ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಆಸ್ಪತ್ರೆಗೆ ದಾಖಲಾದ ದಿನದಿಂದ ಶ್ರೀನಿವಾಸ್ ಮೇಲೆ ಇಲಿಗಳು ದಾಳಿ ಮಾಡುತ್ತಲೇ ಇವೆ. ಅವರ ಎರಡೂ ಕೈಗಳು, ಎರಡು ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಈ ಹಿಂದೆಯೂ ಇದೇ ಪರಿಸ್ಥಿತಿ ಉಂಟಾಗಿತ್ತೆಂದು ಇತರೆ ರೋಗಿಗಳು ದೂರು ನೀಡಿದ್ದಾರೆ. ಶ್ರೀನಿವಾಸ್ ಇರುವ ವಾರ್ಡ್‌ನಲ್ಲಿ ತುಂಬಾ ಜನ ರೋಗಿಗಳಿದ್ದು, ಹಲವರಿಗೆ ಇದೇ ರೀತಿ ಇಲಿಗಳು ದಾಳಿ ಮಾಡಿವೆ ಎಂದು ತಿಳಿದುಬಂದಿದೆ.