CrimeNational

ಬೆಳ್ಳಂಬೆಳಗ್ಗೆ ಬೇಟೆಗಾರರ ಗುಂಡಿನ ಮೊರೆತ: 12ಜಿಂಕೆಗಳ ಮಾರಣ ಹೋಮ

ಕರ್ನೂಲ್:‌ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಾರಾಯಣಪುರಂ ಗ್ರಾಮದ ಹೊಲಗಳಲ್ಲಿ ಬೇಟೆಗಾರರು ಬೆಳ್ಳಂಬೆಳಗ್ಗೆಯೇ ಗುಂಡಿನ ದಾಳಿ ನಡೆಸಿದ್ದಾರೆ. ಜಿಂಕೆ ಹಿಂಡಿನಲ್ಲಿದ್ದ ಹನ್ನೆರಡು ಜಿಂಕೆಗಳು ಕಳ್ಳ ಬೇಟೆಗಾರರ ​​ಗುಂಡಿಗೆ ಬಲಿಯಾಗಿವೆ.  ಬೇಟೆಯಾಡಿದ ಬಳಿಕ ದುಷ್ಟರು, ತಾವು ತಂದಿದ್ದ ಕತ್ತಿಗಳಿಂದ ಜಿಂಕೆ ತಲೆಗಳನ್ನು ತುಂಡರಿಸಿ ಮಾಂಸ ಬೇರೆ ತಲೆ ಬೇರೆ ಮಾಡಿ ಹೊತ್ತೊಯ್ದಿದ್ದಾರೆ.

ಭಾನುವಾರ (ಮಾರ್ಚ್ 6, 2022) ಬೆಳಿಗ್ಗೆ, ಕೆಲವು ಬೇಟೆಗಾರರು ಆದೋನಿ ವಲಯದ ನಾರಾಯಣಪುರಂ ಹೊಲಗಳ ಗೋರ್ಜಿ ವಂಕ ಬಳಿ ಜೀಪಿನಲ್ಲಿ ಬಂದು ಬೇಟೆಗಾಗಿ ಕಾದು ಕುಳಿತಿದ್ದಾರೆ. ಏನೂ ಅರಿಯದ ಮೂಕ ಪ್ರಾಣಿಗಳು ಹೊಲಗಳಿಗೆ ಬರುತ್ತಿದ್ದಂತೆ ಸ್ವಲ್ಪ ಸಮಯದ ನಂತರ ಬಂದೂಕುಗಳೊಂದಿಗೆ ಜಿಂಕೆಗಳ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ. ಇದರಿಂದ 12 ಜಿಂಕೆಗಳು ಸ್ಥಳದಲ್ಲೇ ನೆಲಕ್ಕುರುಳಿವೆ. ಜಿಂಕೆಯ ತಲೆಗಳನ್ನು  ಕತ್ತರಿಸಿ ಅಲ್ಲಿಯೇ ಎಸೆದಿದ್ದಾರೆ. ಮಾಂಸವನ್ನು ಜೀಪಿನಲ್ಲಿ ತುಂಬಿಕೊಂಡು ಗ್ರಾಮದ ಮೂಲಕ ಪರಾರಿಯಾಗಿದ್ದಾರೆ. ಘಟನೆಯನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಜಿಂಕೆಗಳ ತಲೆಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಕರ್ನೂಲು ಜಿಲ್ಲೆಯಲ್ಲಿ ವನ್ಯಜೀವಿಗಳ ರಕ್ಷಣೆ ತುಂಬಾ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದೋನಿ ಮತ್ತು ಕೌತಾಳಂ ವಲಯಗಳಲ್ಲಿ ಜಿಂಕೆ ಮಾಂಸಕ್ಕಾಗಿ ಕಳ್ಳ ಬೇಟೆಗಾರರು ಬೇಟೆಯಾಡುತ್ತಿರುವುದರಿಂದ ರೈತರು, ಕೃಷಿ ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಜಿಂಕೆಗಳ ತಲೆಗಳನ್ನು ಕತ್ತಿಗಳಿಂದ ಬರ್ಬರವಾಗಿ ಕಡಿದು ಹಾಕಿದ್ದಾರೆ. ಸಿಕ್ಕ ಸಿಕ್ಕ ಹೊಲಗಳಲ್ಲಿ ಜಿಂಗಳ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

Share Post