1 ಸಾವಿರ ಕೋಟಿ ಬೋಗಸ್ ಖರ್ಚು ತೋರಿಸಿತಾ ಹೀರೊ ಮೋಟೋಕಾರ್ಪ್..?
ನವದೆಹಲಿ: ಇತ್ತೀಚೆಗಷ್ಟೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೀರೊ ಮೋಟೋಕಾರ್ಪ್ ಸಂಸ್ಥೆ ಹಿರಿಯ ಅಧಿಕಾರಿಗಳ ಆಸ್ತಿಗಳ ಮೇಲೆ ದಾಳಿ ಮಾಡಿತ್ತು. ಅದರ ತಪಾಸಣೆ ಇನ್ನೂ ಮುಂದುವರೆದಿದ್ದು, ಈ ವೇಳೆ ಅಚ್ಚರಿಯ ಅಂಶಗಳು ಬೆಳಕಿಗೆ ಬಂದಿವೆ. ಆಟೋಮೊಬೈಲ್ ಕ್ಷೇತ್ರದ ಈ ದೈತ್ಯ ಕಂಪನಿ 1 ಸಾವಿರ ಕೋಟಿ ರೂಪಾಯಿ ಬೋಗಸ್ ಖರ್ಚು ತೋರಿಸಿದೆ. ಅದಕ್ಕಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಖಾಸಗಿ ಸುದ್ದಿಸಂಸ್ಥೆಯೊಂದು ಟ್ವೀಟ್ ಮಾಡಿದೆ. ಹೀರೊ ಮೋಟೊಕಾರ್ಪ್ 1 ಸಾವಿರ ಕೋಟಿ ರೂಪಾಯಿ ಖರ್ಚು ತೋರಿಸಿದೆ. ಆದ್ರೆ ಇದಕ್ಕೆ ಸುಳ್ಳು ದಾಖಲೆ ಸೃಷ್ಟಿ ಮಾಡಲಾಗಿದೆ. ಅಷ್ಟು ಖರ್ಚು ಮಾಡಿಯೇ ಇಲ್ಲ ಎಂದು ಐಟಿ ಇಲಾಖೆ ತಿಳಿಸಿರುವುದಾಗಿ ಖಾಸಗಿ ಸುದ್ದಿಸಂಸ್ಥೆ ತನ್ನ ಟ್ವೀಟ್‌ನಲ್ಲಿ ಹೇಳಿದೆ. ಇನ್ನೊಂದೆಡೆ ದೆಹಲಿಯ ಹೊರವಲಯದ ಚತ್ರಪುರ್ ಬಳಿ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಫಾರ್ಮ್‌ಹೌಸ್‌ನ್ನು ಹೀರೊ ಇಂಡಿಯಾದವರು ಕಪ್ಪು ಹಣದ ರೂಪದಲ್ಲಿ ನಗದು ಹಣ ನೀಡಿ ಖರೀದಿಸಿದ್ದಾರೆ ಎಂಬುದೂ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ.