ʻಬುಲ್ಲಿ ಬಾಯ್ʼ ಪ್ರಕರಣ: ಮತ್ತೊಬ್ಬ ವಿದ್ಯಾರ್ಥಿ, ಮಹಿಳೆ ಬಂಧನ
ಮುಂಬೈ; ಬುಲ್ಲಿ ಬಾಯ್ ಮೊಬೈಲ್ ಅಪ್ಲಿಕೇಷನ್ ನಲ್ಲಿ ಮುಸ್ಲಿ ಮಹಿಳೆಯರ ಫೋಟೋಗಳನ್ನು ತಿರುಚಿ ಪ್ರಕಟಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು, ಮತ್ತೊಬ್ಬ ವಿದ್ಯಾರ್ಥಿ ಹಾಗೂ ಒಬ್ಬ ಮಹಿಳೆಯನ್ನು ಬಂಧಿಸಿದ್ದಾರೆ.
ಎರಡು ದಿನದ ಹಿಂದೆಯಷ್ಟೇ, ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿ, ಮುಂಬೈಗೆ ಕರೆದೊಯ್ದಿದ್ದರು. ಇದಾದ ನಂತರ ಮಯಾಂಕ್ ಕುಮಾರ್ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ನಡುವೆ ಉತ್ತರಾಖಂಡ್‌ನಲ್ಲಿ ಮಹಿಳೆಯೊಬ್ಬರನ್ನು ಕೂಡಾ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಮೂವರೂ ಆರೋಪಿಗಳನ್ನು ಇಂದು ಮುಂಬೈ ಕೋರ್ಟ್ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ಬುಲ್ಲಿ ಬಾಯ್ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ತಿರುಚಿ ಅಪ್‌ಲೋಡ್ ಮಾಡಲಾಗುತ್ತಿತ್ತು. ಈ ಸಂಬಂಧ ಇತ್ತೀಚೆಗೆ ಪತ್ರಕರ್ತೆಯೊಬ್ಬರು ಟ್ವೀಟ್ ಮಾಡಿ, ಪೊಲೀಸರ ಗಮನ ಸೆಳೆದಿದ್ದರು. ಇದಾದ ಮೇಲೆ ದೆಹಲಿ, ಹೈದರಾಬಾದ್, ಮುಂಬೈ ಸೇರಿದಂತೆ ಹಲವು ಕಡೆ ಮಹಿಳೆಯರು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಮುಂಬೈ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.