ಬಿಜೆಪಿ ಸೇರಿದ ಆಂಧ್ರ ಮಾಜಿ ಮುಖ್ಯಮಂತ್ರಿ ಕಿರಣ್ಕುಮಾರ್ ರೆಡ್ಡಿ
ನವದೆಹಲಿ; ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ಕುಮಾರ್ ರೆಡ್ಡಿಯವರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಅರುಣ್ ಸಿಂಗ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ಕಿರಣ್ಕುಮಾರ್ ರೆಡ್ಡಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ಕಿರಣ್ ಕುಮಾರ್ ರೆಡ್ಡಿ ಅನಂತರ ಕಿರಣ್ ಜೈ ಸಮೈಕ್ಯ ಆಂಧ್ರ ಎಂಬ ಪಕ್ಷವನ್ನು ಕಟ್ಟಿದ್ದರು. 2014ರಲ್ಲಿ ಅವರ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಈ ಚುನಾವಣೆಯಲ್ಲಿ ಸ್ವತಃ ಕಿರಣ್ ಕುಮಾರ್ ರೆಡ್ಡಿ ಕೂಡಾ ಹೀನಾಯವಾಗಿ ಸೋಲನುಭವಿಸಿದ್ದರು. ಅನಂತರ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ವಾಪಾಸ್ ಆಗಿದ್ದ ಕಿರಣ್ ಕುಮಾರ್ ರೆಡ್ಡಿಯವರು, ಮಾರ್ಚ್ 12ರಂದು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರು. ಇದೀಗ ಅವರು ಬಿಜೆಪಿ ಸೇರಿದ್ದಾರೆ.