ರಾಷ್ಟ್ರಪತಿ ಚುನಾವಣೆ; ಸ್ಪರ್ಧೆಗೆ ನಾಯಕರ ಹಿಂದೇಟು
ಶ್ರೀನಗರ; ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅಭ್ಯರ್ಥಿ ಹಾಕಲು ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಸಮಾನ ಮನಸ್ಕರ ಪಕ್ಷಗಳು ಪ್ರಯತ್ನ ನಡೆಸುತ್ತಿವೆ. ಆದ್ರೆ, ಚುನಾವಣೆ ಸ್ಪರ್ಧಿಸುವುದಕ್ಕೆ ಅರ್ಹರಿರುವ ನಾಯಕರು ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ. ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಅಭ್ಯರ್ಥಿಯಾಗುತ್ತಾರೆ ಎಂದು ಹೇಳಲಾಗಿತ್ತು. ಆದ್ರೆ ಅವರು ನಾನು ಸ್ಪರ್ಧೆ ಮಾಡುವುದಿಲ್ಲ ಎಂದಿದ್ದಾರೆ. ಈ ನಡುವೆ ದೇವೇಗೌಡರ ಹೆಸರು ಕೂಡಾ ಚಾಲ್ತಿಗೆ ಬಂದಿತ್ತು. ಆದ್ರೆ ಅವರೂ ಸ್ಪರ್ಧಿಸುವುದಿಲ್ಲ ಎಂದು ನಿನ್ನೆಯಷ್ಟೇ ಕುಮಾರಸ್ವಾಮಿ ಹೇಳಿದ್ದರು. ಇದೀಗ ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಕೂಡಾ ನಾನು ಅಭ್ಯರ್ಥಿಯಾಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ನಾನು ರಾಷ್ಟ್ರಪತಿಯಾಗಬೇಕೆಂದು ಅಂದುಕೊಂಡಿಲ್ಲ, ಅದರ ಬದಲಾಗಿ ಸಂದಿಗ್ಧ ಸ್ಥಿತಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಮಾರ್ಗದರ್ಶನ ನೀಡುವುದಾಗಿ ಅವರು ತಿಳಿಸಿದ್ದಾರೆ. ಈಚೆಗೆ ನಡೆದ ಪ್ರತಿಪಕ್ಷಗಳ ನಾಯಕರ ಸಭೆಯಲ್ಲಿ ರಾಷ್ಟ್ರಪತಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ತಮ್ಮ ಹೆಸರು ಪ್ರಸ್ತಾಪಿಸಿರುವುದಕ್ಕೆ ವಿರೋಧ ಪಕ್ಷದ ನಾಯಕರಿಗೆ ಧನ್ಯವಾದ ತಿಳಿಸಿರುವ ಅವರು, ’ಮಮತಾ ದೀದಿ ಅವರು ನನ್ನ ಹೆಸರು ಪ್ರಸ್ತಾಪಿಸುತ್ತಿದ್ದಂತೆ ವಿರೋಧ ಪಕ್ಷದ ಹಲವು ನಾಯಕರು ಕರೆ ಮಾಡಿ ಬೆಂಬಲ ಸೂಚಿಸಿದರು. ಈ ಅನಿರೀಕ್ಷಿತ ಬೆಳವಣಿಗೆ ಬಗ್ಗೆ ಪಕ್ಷದ ಹಿರಿಯ ನಾಯಕರು ಮತ್ತು ಕುಟುಂಬದವರ ಜತೆ ಚರ್ಚಿಸಿದ್ದೇನೆ‘ ಎಂದು ಫಾರೂಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.