ಹಿಮಾಚಲ ಪ್ರದೇಶ ಚುನಾವಣೆ; ಅಭ್ಯರ್ಥಿ ಪಟ್ಟಿ ಪ್ರಕಟಿಸಿದ ಬಿಜೆಪಿ
ನವದೆಹಲಿ; ಮುಂದಿನ ತಿಂಗಳು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ನಿಗದಿಯಾಗಿದೆ. ಈಗಾಗಲೇ ಎಲ್ಲಾ ಪಕ್ಷಗಳೂ ಸಂಘಟನೆ ಹಾಗೂ ಟಿಕೆಟ್ ಹಂಚಿಕೆ ಬಗ್ಗೆ ತಲೆ ಕೆಡಿಸಿಕೊಂಡಿವೆ. ಈ ನಡುವೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. ಇದರಲ್ಲಿ ಒಬ್ಬ ಸಚಿವರು ಸೇರಿ ಹನ್ನೊಂದು ಹಾಲಿ ಶಾಸಕರಿಗೆ ಟಿಕೆಟ್ ನೀರಾಕರಿಸಲಾಗಿದೆ.
ನವೆಂಬರ್ 12ರಂದು 68 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ ಬಿಜೆಪಿ 62 ಸ್ಥಾನಗಳಿಗೆ ಟಿಕೆಟ್ ಹಂಚಿಕೆ ಮಾಡಿದೆ. ಹಾಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸಿರಾಜ್ ಕ್ಷೇತ್ರದಿಂದ ಅಖಾಡಕ್ಕಿಳಿಯುತ್ತಿದ್ದಾರೆ. ಸಚಿವರಾದ ಸುರೇಶ್ ಭಾರದ್ವಾಜ್, ರಾಕೇಶ್ ಪಟಾನಿ ಅವರ ಕ್ಷೇತ್ರಗಳನ್ನು ಬದಲಿಸಲಾಗಿದೆ. ಹಾಲಿ ಶಿಮ್ಲಾ ನಗರ ಕ್ಷೇತ್ರದ ಶಾಸಕರಾಗಿರುವ ಭಾರದ್ಜಾಜ್‌ಗೆ ಕಸುಂಪ್ಟಿ ಹಾಗೂ ನೂರ್‌ಪುರ ಶಾಸಕ ಪಟಾನಿಯ ಅವರಿಗೆ ಫತೇಪುರ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ. ಪರಿಶಿಷ್ಟ ಪಂಗಡದ ಎಂಟು ಮಂದಿಗೆ ಟಿಕೆಟ್ ನೀಡಲಾಗಿದೆ. ಐವರು ಮಹಿಳೆಯರೂ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.