ಮೇಕೆದಾಟು ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ; ಸ್ಟಾಲಿನ್
ಚೆನ್ನೈ; ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಅಣೆಕಟ್ಟು ಸಮಸ್ಯೆ ಚರ್ಚಿಸುವ ನಿರ್ಧಾರ ಆಘಾತಕಾರಿ ಮತ್ತು ಕಾನೂನುಬಾಹಿರ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ನಾವು ಬಿಡುವುದಿಲ್ಲ. ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.
ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್ ನೇತೃತ್ವದಲ್ಲಿ ನಿಯೋಗವೊಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ, ಪ್ರಾಧಿಕಾರದ ಅಧ್ಯಕ್ಷ ಎಸ್. ಕೆ. ಹಲ್ದಾರ್ ಅವರ ಹೇಳಿಕೆಯಿಂದ ತಮಿಳುನಾಡಿನ ರೈತರು ಮತ್ತು ಜನರಿಗೆ ಆಗಿರುವ ನೋವಿನ ಬಗ್ಗೆ ತಿಳಿಸಲಾಗುವುದು ಎಂದರು.
ಶುಕ್ರವಾರ ಹಲ್ದಾರ್ ಅವರು, ತಂಜಾವೂರು ಜಿಲ್ಲೆಯ ಕಲ್ಲನೈ ಅಣೆಕಟ್ಟು ಪರಿಶೀಲಿಸಿದ ನಂತರ, ತಮಿಳುನಾಡಿನ ಆಕ್ಷೇಪಣೆ ಹೊರತಾಗಿಯೂ ಮೇಕೆದಾಟು ಸಮಸ್ಯೆಯನ್ನು ಚರ್ಚಿಸಲು ಪ್ರಾಧಿಕಾರಕ್ಕೆ ಅಧಿಕಾರವಿದೆ ಎಂದು ಹೇಳಿದ್ದರು. ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿರುವಾಗ ಚರ್ಚಿಸಲು ಪ್ರಾಧಿಕಾರಕ್ಕೆ ಅಧಿಕಾರವಿಲ್ಲ. ಇದು ಗೊತ್ತಿದ್ದರೂ ಅಧ್ಯಕ್ಷರು ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿರುವುದು ಕಾನೂನು ಬಾಹಿರ ಎಂದು ಸ್ಟಾಲಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ದೆಹಲಿಗೆ ಬಂದಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ಟಾಲಿನ್, ಕೇಂದ್ರ ಸರ್ಕಾರವು ಒತ್ತಡಕ್ಕೆ ಮಣಿಯಬಾರದು ಎಂದರು.