Bengaluru

ಕರ್ನಾಟಕಕ್ಕೆ ಬರುತ್ತಿದ್ದೇನೆ; ಕನ್ನಡದಲ್ಲೇ ಟ್ವೀಟ್‌ ಮಾಡಿದ ಪ್ರಧಾನಿ ಮೋದಿ

ಬೆಂಗಳೂರು; ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮತ್ತು ನಾಳೆ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರಿನಲ್ಲಿ ಇಂದು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಳೆ ಮೈಸೂರಿನಲ್ಲಿ ನಡೆಯುವ ಯೋಗಾ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇಂದು ಕನ್ನಡದಲ್ಲಿ ಟ್ವೀಟ್‌ ಮಾಡಿದ್ದಾರೆ.

‘ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ. ಅಲ್ಲಿ ಬೆಂಗಳೂರು ಮತ್ತು ಮೈಸೂರಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವೆ. ಮೊದಲ ಕಾರ್ಯಕ್ರಮ ಭಾರತೀಯ ವಿಜ್ಞಾನ ಭವನದಲ್ಲಿ ಮಿದುಳು ಸಂಶೋಧನಾ ಕೇಂದ್ರ ಉದ್ಘಾಟಿಸಲಾಗುವುದು. ಬಾಗ್ಚಿ- ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿಲಾನ್ಯಾಸ ನೆರವೇರಿಸಲಾಗುವುದು. ಸೋಮವಾರ ಮಧ್ಯಾಹ್ನ, ಡಾ.ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಉದ್ಘಾಟನೆ ಮತ್ತು ಡಾ ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯ ಅನಾವರಣ ಮಾಡಲಿದ್ದೇನೆ. 150 ಟೆಕ್ ಹಬ್‌ಗಳ ಲೋಕಾರ್ಪಣೆ ಕೂಡ ಮಾಡುವೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರಿನ ಕಾರ್ಯಕ್ರಮದಲ್ಲಿ, 27,000 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಈ ಕಾಮಗಾರಿಗಳು ವಿವಿಧ ಕ್ಷೇತ್ರಗಳಿಗೆ ಸೇರಿದ್ದು ಬೆಂಗಳೂರಿನ ಹಾಗು ಸುತ್ತಮುತ್ತಲಿನ ಜನರ ‘ಸುಗಮ ಜೀವನ’ಕ್ಕೆ ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂಜೆ 5.30ರ ವೇಳೆಗೆ ಪ್ರಧಾನಿ ಮೋದಿಯವರು ಮೈಸೂರು ತಲುಪಲಿದ್ದಾರೆ. ಅಲ್ಲಿಯೂ ಪ್ರಮುಖ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸುತ್ತಾರೆ. ಸುತ್ತೂರು ಮಠದ ಕಾರ್ಯಕ್ರಮ, ನಾಳೆ ಬೆಳಗ್ಗೆ, ಮೈಸೂರಿನಲ್ಲಿ ಯೋಗ ದಿನದ ಕಾರ್ಯಕ್ರಮದಲ್ಲೂ ಮೋದಿ ಭಾಗವಹಿಸಲಿದ್ದಾರೆ.

Share Post