BengaluruPolitics

ಡಿಕೆಶಿ ವಿರುದ್ಧ ಸಿಬಿಐ ತನಿಖೆ ಹಿಂಪಡೆಯಲು ನಿರ್ಧಾರ; ಸರ್ಕಾರದ ವಿರುದ್ಧ ವಿಜಯೇಂದ್ರ ಗರಂ

ಬೆಂಗಳೂರು; ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆ ಆದೇಶ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ತೀರ್ಮಾನ ಮಾಡಿದೆ. ಇದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರೋಧಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಡಿ.ಕೆ.ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರ ಅದನ್ನು ವಾಪಸ್‌ ಪಡೆಯುವ ನಿರ್ಧಾರ ಕೈಗೊಂಡಿದೆ ಎಂದು ಕಿಡಿಕಾರಿದ್ದಾರೆ. 

ಹಲವಾರು ಮಹನೀಯರು ಸಂವಿಧಾನದ ಘನತೆ, ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯುವುದಕ್ಕಾಗಿ ತನ್ನ ತಪ್ಪಿಲ್ಲದಿದ್ದರೂ ನೈತಿಕ ಹೊಣೆ ಹೊತ್ತು ಅಧಿಕಾರ ತ್ಯಾಗ ಮಾಡಿದ್ದಾರೆ. ಆದ್ರೆ ಕರ್ನಾಟಕದ ರಾಜಕಾರಣಕ್ಕೆ ಕರಾಳ ಇತಿಹಾಸ ಬರೆಯುವುದಕ್ಕಾಗಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲಿರುವ ಸಿಬಿಐ ತನಿಖೆಯ ಕೇಸ್ ಹಿಂತೆಗೆದುಕೊಳ್ಳುವ ನಿಲುವು ತಳೆದಿರುವುದು ಸಾಂವಿಧಾನಿಕ ಹಾಗೂ ಪ್ರಜಾತಂತ್ರ ವ್ಯವಸ್ಥೆಯ ಮೇಲೆ  ಮಾಡಿರುವ ಸವಾರಿ ಎಂದು ವಿಜಯೇಂದ್ರ ಹೇಳಿದ್ದಾರೆ.

ನಿನ್ನೆ ಸಂಜೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅನುಪಸ್ಥಿತಿಯಲ್ಲಿ ಸಚಿವ ಸಂಪುಟ ನಡೆದಿದ್ದು, ಇದರಲ್ಲಿ ಡಿ.ಕೆ.ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆಗೆ ಅನುಮತಿ ನೀಡಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ವಾಪಸ್‌ ಪಡೆಯಲು ತೀರ್ಮಾನ ಮಾಡಲಾಗಿದೆ.

Share Post