ನಾಳೆ 15 ತಿಂಗಳ ರೈತರ ಪ್ರತಿಭಟನೆ ಅಂತ್ಯ ಸಾಧ್ಯತೆ
ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಖಾತರಿ ಸೇರಿದಂತೆ ಪ್ರತಿಭಟನಾ ನಿರತ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಕೇಂದ್ರ ಸರ್ಕಾರ ರೈತರಿಗೆ ಲಿಖಿತ ಭರವಸೆ ನೀಡಿದೆ. ಸರ್ಕಾರ ಭರವಸೆ ನೀಡಿರುವ ಹಿನ್ನಲೆಯಲ್ಲಿ 15 ತಿಂಗಳಿನಿಂದ ಪಟ್ಟುಬಿಡದೆ ನಡೆಯುತ್ತಿರುವ ರೈತರ ಪ್ರತಿಭಟನೆ ಅಂತ್ಯವಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತ ಮುಖಂಡರು ಇಂದು ದೆಹಲಿಯಲ್ಲಿ ಸಭೆ ಸೇರಿ ಚರ್ಚೆ ನಡೆಸಿದರು. ನಂತರ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು, ನಾಳೆ ಮತ್ತೆ ಸಭೆ ಸೇರುತ್ತೇನೆ. ಪ್ರತಿಭಟನೆ ಹಿಂತೆಗೆದುಕೊಳ್ಳುವುದರ ಬಗ್ಗೆ ನಾಳೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಕನಿಷ್ಠ ಬೆಂಬಲ ನೀಡುವ ವಿಚಾರದ ಸಮಿತಿಯಲ್ಲಿ ರೈತರನ್ನು ಸೇರಿಸುವುದು, ಹುತಾತ್ಮ ರೈತರಿಗೆ ಪರಿಹಾರ ನೀಡುವುದು ಹಾಗೂ ಲಿಖಿಂಪುರ ಘಟನೆ ಸಂಬಂಧ ಸಚಿವ ಅಜಯ್ ಮಿಶ್ರಾ ವಜಾ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಕೇಂದ್ರದ ಜೊತೆ ರೈತರು ಚರ್ಚೆ ನಡೆಸುವ ಸಾಧ್ಯತೆ ಇದೆ.
ರೈತರ ಮೇಲಿನ ಪ್ರಕರಣಗಳನ್ನು ಕಾಲಮಿಯೊಳಗೆ ಹಿಂತೆಗೆದಕೊಳ್ಳಬೇಕು, ಮೃತ ರೈತರ ಕುಟುಂಬಗಳಿಗೆ ಪರಿಹಾರದ ಜೊತೆಗೆ ಒಂದು ಉದ್ಯೋಗ ನೀಡಬೇಕು ಸೇರಿದಂತೆ ರೈತರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ತೀರ್ಮಾನಿಸಿದ್ದಾರೆ.