ಮೇಕೆದಾಟು ಯೋಜನೆ ವಿಚಾರ ; ತಮಿಳುನಾಡು ಅರ್ಜಿ ವಿಚಾರಣೆ ಮುಂದೂಡಿಕೆ
ದೆಹಲಿ: ಭಾಷೆ ವಿಚಾರದಲ್ಲಿ ಮಹಾರಾಷ್ಟ್ರ, ನೀರಿನ ವಿಚಾರದಲ್ಲಿ ತಮಿಳುನಾಡು ಎರಡೂ ರಾಜ್ಯಗಳು ರಾಜ್ಯದೊಂದಿಗೆ ಜಗಳ ಕಾಯುತ್ತಲೇ ಇರುತ್ತವೆ. ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ವರ್ಷದ 365 ದಿನವೂ ಏನಾದರೊಂದು ಖ್ಯಾತೆ ತೆಗೆಯುತ್ತಲೇ ಇರುತ್ತದೆ. ಕರ್ನಾಟಕ ರೂಪಿಸುತ್ತಿರುವ ಮೇಕೆದಾಟು ಯೋಜನೆಗೂ ತಮಿಳುನಾಡು ಕ್ಯಾತೆ ತೆಗೆದಿದೆ. ಮೇಕೆದಾಟು ಅಣೆಕಟ್ಟು ಕಟ್ಟದಂತೆ ಕೋರಿ ತಮಿಳುನಾಡು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಂದಕ್ಕೆ ಹಾಕಿದೆ.
ಮಳೆಗಾಲದಲ್ಲಿ ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ಮಳೆನೀರನ್ನು ಸಂಗ್ರಹಿಸಿದ್ರೆ ಬೇಸಿಗೆಯಲ್ಲಿ ನೀರಿನ ಅಭಾವ ನೀಗಿಸುವ ಉದ್ದೇಶದಿಂದ ಕರ್ನಾಟಕ ಕಾವೇರಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸಲು ನಿರ್ಧಾರ ಮಾಡಿತ್ತು. ಆದ್ರೆ ಇದರ ವಿರುದ್ಧವಾಗಿ ತಮಿಳುನಾಡು ಸರ್ಕಾರ ಮೇಲ್ಮನವಿ ಅರ್ಜಿ ಕೂಡ ಸಲ್ಲಿಕೆ ಮಾಡಿತ್ತು. ಅಣೆಕಟ್ಟು ನಿರ್ಮಿಸಲು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಹಸಿರು ನ್ಯಾಯಾಧೀಕರಣ ಮಂಡಳಿ ಕೂಡ ಅಕ್ರಮ ಚಟುವಟಿಕೆ ಬಗ್ಗೆ ಸಾಕ್ಷಿ ಒದಗಿಸುವಲ್ಲಿ ವಿಫಲವಾಯಿತು. ಹಾಗಾಗಿ ತಾವು ದಾಖಲಿಸಿಕೊಂಡಿದ್ದ ಪ್ರಕರಣವನ್ನು ಎನ್ಜಿಟಿ ಕೈ ಬಿಟ್ಟಿತ್ತು.
ಎನ್ಜಿಟಿ ಈ ನಿರ್ಧಾರವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿತ್ತು. ಇಂದು ನಡೆಯಬೇಕಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ನ ನ್ಯಾ.ಖಾನ್ವಿಲ್ಕರ್, ನ್ಯಾ.ಸಿ.ಟಿ.ರವಿಕುಮಾರ್ ದ್ವಿಸದಸ್ಯ ಪೀಠ ವಿಚಾರಣೆಯನ್ನು ಜನವರಿ ೨೫ಕ್ಕೆ ಮುಂದೂಡಿದೆ.