ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿತ; 17 ಮಂದಿ ದುರ್ಮರಣ
ಸೈರಾಂಗ್; ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಸೇತುವೆ ಕುಸಿದು 17 ಮಂದಿ ಸಾವನ್ನಪ್ಪಿರುವ ಘಟನೆ ಮಿಜೋರಾಂನ ಸೈರಾಂಗ್ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಸೇತುವೆ ಕುಸಿದ ಸಂದರ್ಭದಲ್ಲಿ 35-40 ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದರು. ಕುಸಿಯುತ್ತಿದ್ದಂತೆ ಅವಶೇಷಗಳಡಿ ಸಿಲುಕಿ 17 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ.
ಮಿಜೋರಾಮ್ ರಾಜಧಾನಿ ಐಜ್ವಾಲ್‌ನಿಂದ 20 ಕಿಮೀ ದೂರದಲ್ಲಿ ಘಟನಾ ಸ್ಥಳವಿದೆ. “ನಾವು ಅವಶೇಷಗಳಡಿಯಿಂದ 17 ಮೃತ ದೇಹಗಳನ್ನು ಹೊರತೆಗೆದಿದ್ದೇವೆ. ಅಲ್ಲಿ ಇನ್ನೂ ಹಲವರು ಇದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ. ಅಪಘಾತದ ಸ್ಥಳದ ದೃಶ್ಯಗಳನ್ನು ಮಿಜೋರಾಂ ಮುಖ್ಯಮಂತ್ರಿ ಜೊರಾಮ್ತಂಗ ಅವರು X(ಟ್ವಿಟ್ಟರ್) ಮೂಲಕ ಹಂಚಿಕೊಂಡಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.