LifestyleNational

ತಿರುಮಲದಲ್ಲಿ ರಾಜ್ಯದ ಯಾತ್ರಾರ್ಥಿಗಳಿಗಾಗಿ 346 ಕೊಠಡಿ ನಿರ್ಮಾಣ; ಎಸ್‌.ಆರ್‌.ವಿಶ್ವನಾಥ್‌

ತಿರುಪತಿ; ತಿರುಪತಿ ತಿರುಮಲದಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ ಶೀಘ್ರವೇ 346 ಸುಸಜ್ಜಿತ ವಸತಿ ಕೊಠಡಿಗಳು ಸಿದ್ಧವಾಗಲಿವೆ ಎಂದು ಬಿಡಿಎ ಅಧ್ಯಕ್ಷರೂ ಆದ ತಿರುಪತಿ ತಿರುಮಲ ಮಂಡಳಿ ಸದಸ್ಯ ಎಸ್. ಆರ್. ವಿಶ್ವನಾಥ್ ಹೇಳಿದ್ದಾರೆ. ತಿರುಪತಿ ತಿರುಮಲದಲ್ಲಿ ರಾಜ್ಯ ಸರ್ಕಾರದಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ತಿರುಮಲದಲ್ಲಿ ಕರ್ನಾಟಕದ ಯಾತ್ರಾರ್ತಿಗಳು ಬಂದು ವಾಸ್ತವ್ಯ ಹೂಡಲು ಸೌಲಭ್ಯಗಳು ಅಷ್ಟಾಗಿ ಇರಲಿಲ್ಲ. ಜೊತೆಗೆ ರಾಜ್ಯಕ್ಕೆ ಸೇರಿದ ಸುಮಾರು ಏಳು ಎಕರೆ ಜಾಗ ಕೂಡಾ ನ್ಯಾಯಾಲಯದಲ್ಲಿತ್ತು. ಅದೆಲ್ಲವನ್ನು ಈಗ ಸರಿಪಡಿಸಿ ಯಾತ್ರಾರ್ಥಿಗಳಿಗೆ ಅನುಕೂಲ ಆಗುವಂತೆ ಸುಸಜ್ಜಿತ ಕೊಠಡಿಗಳು ಹಾಗೂ ಅಗತ್ಯ ಮೂಲ ಸಣಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಟಿಟಿಡಿ ಸದಸ್ಯ ಎಸ್‌.ಆರ್‌.ವಿಶ್ವನಾಥ್‌ ತಿಳಿಸಿದರು.

ಕರ್ನಾಟಕ ಭವನ ನವೀಕರಣ ವಸತಿಗೃಹಗಳ ನಿರ್ಮಾಣ ಸೇರಿದಂತೆ ಒಟ್ಟಾರೆ ಸುಮಾರು 236 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಒಟ್ಟು 346 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ವಿವಿಧ ಕಾರಣಗಳಿಂದ ಇಲ್ಲಿ ಅಭಿವೃದ್ಧಿ ಕೆಲಸಗಳನ್ನು ನಡೆಸಲು ಆಗುತ್ತಿರಲಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ನೀಡಿದ್ದ ಅನುದಾನ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಮೇಲೆ ನೀಡಿದ ಸಹಕಾರದಿಂದ ಈಗ ಶೀಘ್ರಗತಿಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಅವರು ಇತ್ತೀಚೆಗೆ ತಿರುಮಲಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದರು ಎಂದು ವಿಶ್ವನಾಥ್‌ ಅವರು ನೆನಪಿಸಿಕೊಂಡಿದ್ದಾರೆ. ಮುಂದಿನ ಫೆಬ್ರವರಿ ವೇಳೆಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತದೆ ಎಂದು ವಿಶ್ವನಾಥ್  ಇದೇ ವೇಳೆ ಹೇಳಿದರು.

Share Post