ಎಲ್‌ಒಸಿ ದಾಟಿ ಭಾರತಕ್ಕೆ ಬಂದ ಪಾಕ್ ಬಾಲಕನನ್ನು ಒಪ್ಪಿಸುವಂತೆ ಕುಟುಂಬಸ್ಥರ ಮನವಿ
ಶ್ರೀನಗರ: ದಾರಿ ತಪ್ಪಿ ಗಡಿ ನಿಯಂತ್ರಣ ರೇಖೆ ದಾಟಿ ಭಾರತಕ್ಕೆ ಬಂದ ಪಾಕಿಸ್ತಾನಿ ಬಾಲಕನನ್ನು ಹಸ್ತಾಂತರಿಸುವಂತೆ ಬಾಲಕನ ಕುಟುಂಬಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಅಸ್ಮದ್ ಅಲಿ ಎಂಬ ಪಾಕಿಸ್ತಾನಿ ಬಾಲಕ ಕಳೆದ ವರ್ಷ ನವೆಂಬರ್‌ನಲ್ಲಿ ಗಡಿ ನಿಯಂತ್ರಣ ರೇಖೆ (LOC) ದಾಟಿ ಭಾರತಕ್ಕೆ ಬಂದಿದ್ದ. ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಗಸ್ತು ತಿರುಗುತ್ತಿದ್ದ ಭಾರತೀಯ ಗೂರ್ಖಾ ರೆಜಿಮೆಂಟ್ 3 ನೇ ಬ್ರಿಗೇಡ್ ಸಿಬ್ಬಂದಿ ಬಾಲಕನನ್ನು ವಶಕ್ಕೆ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಾಲಕನನ್ನು ರಣಬೀರ್ ಸಿಂಗ್ ಪೋರಾದಲ್ಲಿರುವ ಬಾಲಾಪರಾಧಿಗೃಹದಲ್ಲಿ ಇರಿಸಿದ್ದಾರೆ.
ಪಾಕಿಸ್ತಾನದ(Pakistan) ಟ್ಯಾಟ್ರಿನೋಟ್ ಗ್ರಾಮವು ಭಾರತದ ನಿಯಂತ್ರಣ ರೇಖೆಗೆ ಸಮೀಪದಲ್ಲಿದೆ. ಅದೇ ಗ್ರಾಮದ ಅಸ್ಮದ್ ಅಲಿ ಸ್ಥಳೀಯ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾನೆ. ಆದರೆ, ಬಾಲಕನಿಗೆ ಪಾರಿವಾಳಗಳೆಂದರೆ ತುಂಬಾ ಇಷ್ಟ ಎಂದು ಬಾಲಕನ ಚಿಕ್ಕಪ್ಪ ಅರ್ಬಾಬ್ ಅಲಿ ಹೇಳಿದ್ದಾರೆ. ಅಸ್ಮದ್ ಅಲಿ ಮಗುವಾಗಿದ್ದು, ಆತನ ಕುಟುಂಬಕ್ಕೆ ರಾಜಕೀಯ ಪಕ್ಷಗಳು ಅಥವಾ ಭಯೋತ್ಪಾದಕ ಸಂಘಟನೆಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅರ್ಬಾಬ್ ಅಲಿ ಹೇಳಿದ್ದಾರೆ. ಅಲ್ಲಿನ ಮಾಧ್ಯಮ ವರದಿ ಪ್ರಕಾರ ಬಾಲಕ ಚಿಕ್ಕ ವಯಸ್ಸಿನಲ್ಲಿಯೇ ಅವನ ತಾಯಿ ನಿಧನರಾಗಿದ್ದಾರೆ ಈಗ ಅವರ ಅಜ್ಜಿಯೊಂದಿಗೆ ಬೆಳೆಯುತ್ತಿದ್ದಾರೆ ಎನ್ನಲಾಗಿದೆ.
ಭಾರತೀಯ ಭದ್ರತಾ ಅಧಿಕಾರಿಗಳು ಬಾಲಕನ ಬಂಧನದ ಬಗ್ಗೆ ಪ್ರತಿಕ್ರಿಯಿಸಿ, ಈ ಹಿಂದೆಯೂ ಹುಡುಗ ದಾರಿ ತಪ್ಪಿದ ಉದಾಹರಣೆಗಳಿವೆ, ಆದರೆ ಆ ಸಮಯದಲ್ಲಿ ಮಾನವೀಯ ಕಾಳಜಿಗೆ ಸ್ಪಂದಿಸಿ ಅವನನ್ನು ಕಳುಹಿಸಿಕೊಡಲಾಗಿತ್ತು. ಆದರೀಗ ಎಲ್‌ಒಸಿಗೆ ಪದೇ ಪದೇ ಪ್ರವೇಶಿಸುವ ಶಂಕೆಯ ಮೇರೆಗೆ ಬಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬಾಲಕ ಅಸ್ಮದ್ ಅಲಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಹಸ್ತಾಂತರಿಸುವ ಸಮಯದಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಯಾವುದೇ ಶಿಕ್ಷಾರ್ಹ ಅಪರಾಧಗಳು ದಾಖಲಾಗಿಲ್ಲ. ಸಂಪೂರ್ಣ ತನಿಖೆ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ಸೈನಿಕರ ಮನಸ್ಸು ಶ್ರೇಷ್ಠವಾಗಿದ್ದು, ಎಲ್ವೋಸಿಯಲ್ಲಿ ಗಸ್ತು ತಿರುಗುತ್ತಿದ್ದಾಗ ತಪ್ಪಿಸಿಕೊಂಡು ಬಂದ ಮಕ್ಕಳು ಮತ್ತು ಮಹಿಳೆಯರಿಗೆ ಮಾನವೀಯತೆಯಿಂದ ಸ್ಪಂದಿಸುತ್ತಾರೆ ಎಂದು ನಿವೃತ್ತ ಸೇನಾ ಅಧಿಕಾರಿಯೊಬ್ಬರು ಹೇಳಿದರು. ಎಲ್ಲಾ ವಿಷಯಗಳನ್ನು ಪರಿಶೀಲಿಸಿದ ನಂತರ ಶೀಘ್ರದಲ್ಲೇ ಅವರ ಕುಟುಂಬ ಸದಸ್ಯರಿಗೆ ಹುಡುಗನನ್ನು ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.