ಅಲ್ಲಿ ಬಿಜೆಪಿ ಜೊತೆ ಮೈತ್ರಿ, ಇಲ್ಲಿ ಖರ್ಗೆ ಜೊತೆ ಮಾತು; ಏನಿದು ಗೌಡರ ಲೆಕ್ಕಾಚಾರ..?
ನವದೆಹಲಿ; ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಮೈತ್ರಿ ಫಿಕ್ಸ್ ಆಗಿದೆ. ಸೀಟು ಹಂಚಿಕೆ ಮಾತುಕತೆಯೂ ಫೈನಲ್ ಆಗಿದೆ. ಕುಮಾರಸ್ವಾಮಿಯವರು ಕೂಡಾ, ಬಿಜೆಪಿಯೊಂದಿಗೆ ನಿಂತು ಕಾಂಗ್ರೆಸ್ ವಿರುದ್ಧ ಸಮರ ಸಾರುತ್ತಿದ್ದಾರೆ. ಹೀಗಿರುವಾಗಲೇ ಮಾಜಿ ಪ್ರಧಾನಿ ದೇವೇಗೌಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಖುದ್ದು ದೇವೇಗೌಡರೇ ಬಿಜೆಪಿ ನಾಯಕರ ಜೊತೆ ಚರ್ಚ ಮಾಡಿ ಮೈತ್ರಿ ಅಂತಿಮಗೊಳಿಸಿದ್ದರು. ಇದೀಗ ಅವರೇ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಿರುವ ರಾಜ್ಯ ರಾಜಕೀಯದಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ.
ಸಂಸತ್‌ನಲ್ಲಿ ಭದ್ರತಾಲೋಪವಾಗಿದ್ದರ ಕುರಿತು ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಈ ವೇಳೆಯಲ್ಲೇ ದೇವೇಗೌಡರು ಹಾಗೂ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿದ್ದಾರೆ. ಈ ಬಗ್ಗೆ ರಾಜ್ಯಸಭಾ ಸದಸ್ಯ ರಾಜೀವ್ ಶುಕ್ಲಾ ಟ್ವೀಟ್ ಮಾಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಸತ್ ಭವನದಲ್ಲಿ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಇಬ್ಬರೂ ಇರುವ ಫೋಟೋವನ್ನು ಹಾಕಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಬಳಿಕ ರಾಜ್ಯದಲ್ಲಿ ಎಲ್ಲಾ 28 ಕ್ಷೇತ್ರಗಳಲ್ಲೂ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಣ ತೊಟ್ಟಿದ್ದಾರೆ. ಕುಮಾರಸ್ವಾಮಿಯವರು ಬಿಜೆಪಿ ಜೊತೆಗಿನ ಮೈತ್ರಿ ನಂತರ ಹಿಂದುತ್ವದ ಜಪ ಮಾಡುತ್ತಿದ್ದಾರೆ. ಹೀಗಿರುವಾಗಲೇ ದೇವೇಗೌಡರು ಖರ್ಗೆಯವರ ಜೊತೆ ಸುದೀರ್ಘ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.