ಕಾರ್ಯಕ್ರಮದಲ್ಲಿ ಅಚಾನಕ್ಕಾಗಿ ಪ್ರಸಾರವಾಯ್ತು ನೀಲಿ ಚಿತ್ರ; ಕೇಂದ್ರ ಸಚಿವ ತಬ್ಬಿಬ್ಬು
ದಿಬ್ರೂಗಡ: ಅಸ್ಸಾಂ ತಿನ್ಸುಕಿಯಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೆಲಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ನೀಲಿಚಿತ್ರ ಪ್ರಸಾರವಾಗಿ ಮುಜುಗರಕ್ಕೀಡಾದ ಘಟನೆ ನಡೆದಿದೆ. ತಿನ್ಸುಕಿಯಾದಲ್ಲಿ ಇಂಡಿಯನ್ ಆಯಿಲ್ ಕಂಪನಿಯ ನೂತನ ಪೆಟ್ರೋಲ್ ಬಿಡುಗಡೆ ಸಮಾರಂಭದಲ್ಲಿ ಸಚಿವರು ಭಾಗವಹಿಸಿದ್ದರು. ಈ ವೇಳೆ ಹೊಸ ಪೆಟ್ರೋಲ್ ಬಗ್ಗೆ ಮಾಹಿತಿಯ ವಿಡಿಯೋ ಪ್ರಸಾರ ಮಾಡಲು ಹೋಗಿ, ಎಡವಟ್ಟಿನಿಂದ ನೀಲಿ ಚಿತ್ರ ಪ್ರಸಾರ ಮಾಡಲಾಗಿದೆ. ಕೇವಲ ಐದು ಸೆಕೆಂಡ್ ನೀಲಿ ವಿಡಿಯೋ ಪ್ಲೇ ಆಗಿದ್ದು, ಇದ್ರಿಂದ ಸಚಿವರು ಮುಜುಗರಕ್ಕೀಡಾಗಿದ್ದಾರೆ.
ನೀಲಿ ಚಿತ್ರ ಪ್ರಸಾರವಾಗುವ ವೇಳೆ ಸಚಿವ ರಾಮೇಶ್ವರ್ ತೇಲಿ, ನೀತಿ ಆಯೋಗದ ಸದಸ್ಯ ವಿ.ಕೆ. ಸಾರಸ್ವತ್, ಇಂಡಿಯನ್ ಆಯಿಲ್ ಕಂಪನಿಯ ಅಧ್ಯಕ್ಷ ಎಸ್.ಎಂ. ವಿದ್ಯಾ, ಅಸ್ಸಾಂ ಕಾರ್ಮಿಕ ಸಚಿವ ಸಂಜಯ್ ಕಿಶನ್ ಹಾಗೂ ಜಿಲ್ಲಾಧಿಕಾರಿಗಳು ಮತ್ತು ಉನ್ನತ ಅಧಿಕಾರಿಗಳು ಅಲ್ಲಿದ್ದರು. ಕ್ಲಿಪ್ ಪ್ರಸಾರವಾಗುವಾಗ ನಾನು ನೋಡಲಿಲ್ಲ, ಬಳಿಕ ನಮ್ಮ ಆಪ್ತ ಕಾರ್ಯದರ್ಶಿ ಈ ರೀತಿಯ ಘಟನೆ ನಡೆದಿದೆ ಎಂದು ತನ್ನ ಗಮನಕ್ಕೆ ತಂದರು, ಆಗ ನನಗೆ ಮುಜುಗರವಾಯ್ತು ಎಂದು ಸಚಿವ ತೆಲಿ ಹೇಳಿದ್ದಾರೆ. ಇನ್ನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ದಿಬ್ರೂಗಢ್ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.