National

ಒಂದಕ್ಕಿಂತ ಹೆಚ್ಚು ಕಡೆ ಚುನಾವಣೆಗೆ ಸ್ಪರ್ಧೆ ಬೇಡ; ಕಾನೂನು ತಿದ್ದುಪಡಿಗೆ ಚುನಾವಣಾ ಆಯೋಗ ಮನವಿ

ನವದೆಹಲಿ; 2 ದಶಕಗಳ ಹಿಂದಿನ ಪ್ರಸ್ತಾವನೆಯೊಂದಕ್ಕೆ ಭಾರತೀಯ ಚುನಾವಣಾ ಆಯೋಗ ಮರುಜೀವ ನೀಡಿದೆ. ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ತಡೆಯಲು ಕಾನೂನಿಗೆ ತಿದ್ದುಪಡಿ ತರಬೇಕೆಂದು ಚುನಾವಣಾ ಆಯೋಗವು ಸರ್ಕಾರವನ್ನು ಒತ್ತಾಯಿಸಿದೆ. ಅದಾಗದಿದ್ದರೆ, ಕ್ಷೇತ್ರ ತೆರವು ಮಾಡಿ ಉಪ ಚುನಾವಣೆಗೆ ಕಾರಣವಾಗುವವರಿಗೆ ದಂಡ ವಿಧಿಸಬೇಕು ಎಂದು ಆಗ್ರಹಿಸಿದೆ.

ಕಾನೂನು ಸಚಿವಾಲಯದಲ್ಲಿ ಶಾಸಕಾಂಗ ಕಾರ್ಯದರ್ಶಿಯೊಂದಿಗಿನ ಇತ್ತೀಚಿನ ಚರ್ಚೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ಈ ಸುಧಾರಣಾ ಕ್ರಮಕ್ಕೆ ಒತ್ತಾಯಿಸಿದರು. 2004ರಲ್ಲಿ ಮೊದಲಬಾರಿಗೆ ಇದನ್ನು ಪ್ರಸ್ತಾಪಿಸಲಾಗಿತ್ತು. ಅಸ್ತಿತ್ವದಲ್ಲಿರುವ ಚುನಾವಣಾ ಕಾನೂನಿನ ಪ್ರಕಾರ ಯಾವುದೇ ಅಭ್ಯರ್ಥಿಯು ಸಾರ್ವತ್ರಿಕ ಚುನಾವಣೆ ಅಥವಾ ಉಪ-ಚುನಾವಣೆಗಳಲ್ಲಿ ಎರಡು ವಿಭಿನ್ನ ಕ್ಷೇತ್ರಗಳಿಂದ ಸ್ಪರ್ಧಿಸಲು ಅನುಮತಿಸಲಾಗಿದೆ. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಸ್ಥಾನಗಳಿಂದ ಚುನಾಯಿತರಾದರೆ, ಆ ವ್ಯಕ್ತಿಯು ತಾನು ಗೆದ್ದ ಸ್ಥಾನಗಳಲ್ಲಿ ಒಂದನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದೆ. ‌ಪ್ರಜಾಪ್ರತಿನಿಧಿ ಕಾಯಿದೆಗೆ 1996ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಒಬ್ಬ ವ್ಯಕ್ತಿಯನ್ನು ಎರಡಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ. ಈ ತಿದ್ದುಪಡಿಗೆ ಮುನ್ನ, ಅಭ್ಯರ್ಥಿ ಸ್ಪರ್ಧಿಸಬಹುದಾದ ಕ್ಷೇತ್ರಗಳ ಸಂಖ್ಯೆಗೆ ಯಾವುದೇ ಅಡ್ಡಿ ಇರಲಿಲ್ಲ. ಒಬ್ಬ ವ್ಯಕ್ತಿ ಒಂದು ಬಾರಿಗೆ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಸ್ಪರ್ಧಿಸುವುದನ್ನು ತಡೆಯಲು ಚುನಾವಣಾ ಆಯೋಗವು 2004ರಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿನ ಕೆಲವು ಸೆಕ್ಷನ್‌ಗಳಿಗೆ ತಿದ್ದುಪಡಿ ತರಬೇಕೆಂದು ಅಭಿಪ್ರಾಯಪಟ್ಟಿತ್ತು.

Share Post