ಎಷ್ಟು ತಿಂದೆವು ಅನ್ನೋದಲ್ಲ.. ಯಾವಾಗ ತಿಂದೆವು ಅನ್ನೋದು ಮುಖ್ಯ..!
ಬೆಳಗಿನ ಹೊತ್ತು ರಾಜನಂತೆ ಹೊಟ್ಟೆತುಂಬಾ ಭೂರಿ ಭೋಜನ ಮಾಡಬೇಕು, ಮಧ್ಯಾಹ್ನದ ಹೊತ್ತು ಮಂತ್ರಿಯಂತೆ ಆಲೋಚನೆ ಮಾಡಿ ತಿನ್ನಬೇಕು, ರಾತ್ರಿ ವೇಳೆಯಲ್ಲಿ ಸೈನಿಕನಂತೆ ಸ್ವಲ್ಪವೇ ತಿನ್ನಬೇಕು ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಈ ಮಾತಿನಲ್ಲಿ ಎಷ್ಟು ನಿಜವಿದೆಯೋ ಗೊತ್ತಿಲ್ಲ. ಆದರೆ, ನಾವು ಆಹಾರ ಸೇವಿಸುವ ಸಮಯ ನಮ್ಮ ಆರೋಗ್ಯ ಅದರಲ್ಲೂ ಮುಖ್ಯವಾಗಿ ನಮ್ಮ ಸ್ಥೂಲಕಾಯದ ಮೇಲೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ.
ಬೆಳಗಿನ ಸಮಯದಲ್ಲಿ ಹೆಚ್ಚಾಗಿ ತಿನ್ನುವುದು, ನಿದ್ದೆ ಮಾಡುವುದಕ್ಕಿಂತ ತುಂಬಾ ಸಮಯಕ್ಕೆ ಮುಂಚೆ ಆಹಾರ ಸೇವಿಸುವುದು ನಮ್ಮ ಆರೋಗ್ಯದ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಒಂದು ಸಂಶೋಧನೆಯ ಪ್ರಕಾರ ತೂಕ ಕಡಿಮೆಯಾವುದಕ್ಕೆ ಪ್ರಯತ್ನಿಸುತ್ತಿರುವ ಮಹಿಳೆಯರು, ಬೇಗ ಊಟ ಮಾಡುವುದರಿಂದ ಅನೂಕೂಲಕರ ಫಲಿತಾಂಶ ಸಿಗುತ್ತದಂತೆ. ತಡವಾಗಿ ಅಲ್ಪ ಆಹಾರ ಸೇವಿಸುವವರಲ್ಲಿ ಬಿಎಂಐ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ಮತ್ತೊಂದು ಸಂಶೋಧನೆ ತಿಳಿಸುತ್ತದೆ. ಬೆಳಗ್ಗೆ ರಾಜನಂತೆ, ಮಧ್ಯಾಹ್ನ ಮಂತ್ರಿಯಂತೆ, ರಾತ್ರಿ ಸೈನಿಕನಂತೆ ಆಹಾರ ಸೇವನೆ ಮಾಡಬೇಕೆಂಬ ಹಳೇ ನಂಬಿಕೆಯನ್ನು ಲಂಡನ್ ಸಂಶೋಧಕರು ಅಂಗೀರಿಸುತ್ತಾರೆ. ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ ನ್ಯೂಟ್ರಿಷಿನಲ್ ಸೈನ್ಸಸ್‌ನ ಪ್ರೊಫೆಸರ್ ಆಗಿರುವ ಡಾಕ್ಟರ್ ಗೆರ್ಣಾ ಪಾಟ್ ಈ ಬಗ್ಗೆ ವಿವರಿಸಿದ್ದಾರೆ ಕೂಡಾ.
ರಾತ್ರಿ ಜಾಸ್ತಿ ತಿಂದರೆ ಯಾಕೆ ಜೀರ್ಣವಾಗುವುದಿಲ್ಲ..?
ಸಾಮಾನ್ಯವಾಗಿ ನಮ್ಮ ಅಭ್ಯಾಸಗಳಿಗೆ ತಕ್ಕಂತೆ ನಮ್ಮ ಜೀವನ ವಿಧಾನ (ಬಾಡಿ ಕ್ಲಾಕ್) ಕೂಡಾ ಇರುತ್ತದೆ. ದಿನವೂ ಸರಿಸುಮಾರು ಒಂದೇ ಸಮಯಕ್ಕೆ ನಿದ್ದೆಯಿಂದ ಏಳುವುದು, ಒಂದೇ ಸಮಯಕ್ಕೆ ನಿದ್ದೆ ಬರುವುದು ಎಲ್ಲವೂ ಬಾಡಿ ಕ್ಲಾಕ್ ಕೆಲಸದ ಒಂದು ಭಾಗವೇ.
ಆ ಸಮಯದಲ್ಲಿ ದೇಹದ ಗಡಿಯಾರವು ರಕ್ತದೊತ್ತಡ, ದೇಹದ ಉಷ್ಣತೆ ಮತ್ತು ಹಾರ್ಮೋನ್ ಮಟ್ಟವನ್ನು ನಿಯಂತ್ರಿಸುವ ಮೂಲಕ ದೇಹದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಸೂಚನೆಗಳನ್ನು ನೀಡುತ್ತದೆ. ಅದೇ ಕೆಲಸವನ್ನು ನಿಯಮಿತವಾಗಿ ಅದೇ ಸಮಯದಲ್ಲಿ ಮಾಡುವ ಮೂಲಕ, ನಮ್ಮ ಜೈವಿಕ ಗಡಿಯಾರವು ಆ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸುತ್ತದೆ. ನಿದ್ದೆಯ ಮಾದರಿಯಲ್ಲೇ ಭೋಜನದ ವೇಳೆ ಕೂಡಾ ಜೈವಿಕ ಗಡಿಯಾರದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ. ಈ ಅಧ್ಯಯನವನ್ನು ಕ್ರೋನೋ ನ್ಯೂಟ್ರಿಷನ್ ಎಂದು ಕರೆಯುತ್ತಾರೆ.
‘ಪ್ರತಿ 24 ಗಂಟೆಗಳಿಗೊಮ್ಮೆ ಜೈವಿಕ ಗಡಿಯಾರ ಯಾವ ಸಮಯದಲ್ಲಿ ಯಾವ ಕ್ರಿಯೆ ನಡೆಯುತ್ತದೆ ಎಂಬ ಸಂದೇಶವನ್ನು ದೇಹಕ್ಕೆ ರವಾನಿಸುತ್ತದೆ. ಅದಕ್ಕಾಗಿಯೇ ರಾತ್ರಿಯಲ್ಲಿ ಹೆಚ್ಚಿನ ಪ್ರಮಾಣದ ಆಹಾರವನ್ನು ಸೇವಿಸದಿರುವುದು ಉತ್ತಮ. ಜೀವ ಗಡಿಯಾರವು ದೇಹಕ್ಕೆ ಈಗಾಗಲೇ ನಿದ್ರೆಗೆ ಹೋಗಲು ಸಮಯವಾಗಿದೆ ಎಂಬ ಸಂದೇಶವನ್ನು ಕಳುಹಿಸುತ್ತದೆ. ಇದು ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಪರಿಣಾಮವಾಗಿ, ಸವೆತವೂ ನಿಧಾನವಾಗುತ್ತದೆ ”ಎಂದು ಪ್ರೊಫೆಸರ್ ಗೆರ್ಡಾ ಹೇಳಿದರು.
ರಾತ್ರಿ ವೇಳೆಯಲ್ಲಿ ಆಹಾರ ಅಷ್ಟು ಸುಲಭವಾಗಿ ಜೀರ್ಣವಾಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಹಾಗೆ ಯಾಕೆ ನಡೆಯುತ್ತದೆ ಎಂಬುದಕ್ಕೆ ಉತ್ತರ ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ ಅಂತ ಸಂಶೋಧಕರು ಹೇಳುತ್ತಿದ್ದಾರೆ. ಬೆಳಗಿನ ಸಮಯದಲ್ಲಿ ತೆಗೆದುಕೊಂಡ ಆಹಾರ ಜೀರ್ಣವಾಗುವುದಕ್ಕಿಂತ, ರಾತ್ರಿ ವೇಳೆಯಲ್ಲಿ ಸೇವಿಸಿದ ಆಹಾರ ಜೀರ್ಣವಾಗುವುದಕ್ಕೆ ಕಡಿಮೆ ಶಕ್ತ ಖರ್ಚಾಗುತ್ತದೆ. ಆದ್ದರಿಂದಲೇ ರಾತ್ರಿ ವೇಳೆ ಹೆಚ್ಚು ಆಹಾರ ಸೇವಿಸುವುದರಿಂದ ಕ್ಯಾಲರಿಗಳು ಹೆಚ್ಚಾಗುವ ಅವಕಾಶ ಇರುತ್ತದೆ ಎಂದು ಕೆಲವು ಸಂಶೋಧನೆಗಳಲ್ಲಿ ಸಾಬೀತಾಗಿದೆ ಎಂದು ಜೋನಾಥನ್ ವಿವರಿಸಿದ್ದಾರೆ.
ಊಟ ಯಾವಾಗ ಮಾಡಬೇಕು..? ಯಾವ ಸಮಯದಲ್ಲಿ ಮಾಡಬಾರದು..?
ಸಂಶೋಧಕರ ಪ್ರಕಾರ ನಾವು ತಿನ್ನುವ ಆಹಾರವನ್ನು ಬದಲಾಯಿಸುವ ಅಗತ್ಯವೇ ಇಲ್ಲ. ಬದಲಾಗಿ ನಾವು ಆಹಾರ ತೆಗೆದುಕೊಳ್ಳುವ ಸಮಯದಲ್ಲಿ ಬದಲಾವಣೆ ತಂದುಕೊಳ್ಳಬೇಕು ಅಷ್ಟೇ. ಇದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ನಾನು ಊಟ ಮಾಡುವ ಸಮಯಕ್ಕೆ ಸಂಬಂಧಿಸಿದಂತೆ ಇನ್ನೂ ಹಲವಾರು ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರಗಳು ಸಿಕ್ಕಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉದಾಹರಣೆಗೆ ಊಟ ಯಾವಾಗ ಮಾಡಬೇಕು, ಯಾವಾಗ ಮಾಡಬಾರದು..? ವಿವಿಧ ಷಿಫ್ಟುಗಳಲ್ಲಿ ಕೆಲಸ ಮಾಡುವವರ ಮೇಲೆ ಊಟದ ವೇಳೆಯ ಪ್ರಭಾವ ಹೇಗಿರುತ್ತದೆ..? ಕೆಲವು ರೀತಿಯ ಪದಾರ್ಥಗಳನ್ನು ಕೆಲವು ವೇಳೆಗಳಲ್ಲಿಯೇ ಸೇವಿಸಬೇಕಾ..? ಇಂತಹ ಪ್ರಶ್ನೆಗಳಿಗೆ ಇದುವರೆಗೂ ಸೂಕ್ತ ಉತ್ತರಗಳು ಸಿಕ್ಕಿಲ್ಲ. ಆದರೆ ಹಗಲಿನಲ್ಲಿಯೇ ನಮ್ಮ ಶರೀರಕ್ಕೆ ಹೆಚ್ಚು ಕ್ಯಾಲರಿಗಳು ಬೇಕೆಂದೂ, ಅದರಲ್ಲೂ ಬೆಳಗಿನ ಊಟದ ಸಮಯದಲ್ಲೇ ಹೆಚ್ಚಿನ ಆಹಾರ ತೆಗೆದುಕೊಳ್ಳಬೇಕೆಂದು ವಿದೇಶಿ ಸಂಶೋಧಕರು ಸಲಹೆ ನೀಡುತ್ತಾರೆ.