DistrictsLifestyle

Chukki chithra; ಕೋಟಿ ಚುಕ್ಕಿಗಳಿಂದ ಅರಳುವ ಸುಂದರ `ಚುಕ್ಕಿಚಿತ್ರ’!

ಮೈಸೂರು; ಚುಕ್ಕಿಗಳಿಂದ ರಂಗೋಲಿ ಬರೆಯುತ್ತಾರೆ, ಚುಕ್ಕಿಗಳನ್ನು ಸೇರಿಸಿ ಚಿತ್ರ ರಚಿಸುತ್ತಾರೆ. ಇದನ್ನು ಬಿಟ್ಟರೆ ಚುಕ್ಕಿಯನ್ನು ಇನ್ನು ಹೇಗೆ ಕಲಾಕೃತಿ ರಚಿಸಲು ಸಾಧ್ಯ? ಬಹುತೇಕರಿಗೆ ಇದು ಗೊತ್ತಿರುವುದಿಲ್ಲ. ಚಿಕ್ಕ ಚುಕ್ಕಿಯನ್ನು ಚೊಕ್ಕವಾಗಿ ಬಳಸಿಕೊಂಡು ಅದರಲ್ಲೇ ಚಿತ್ರ ರಚಿಸುತ್ತಾರೆ. ಅದನ್ನು `ಚುಕ್ಕಿಚಿತ್ರ’ ಎನ್ನುತ್ತಾರೆ. ಮೈಸೂರಿನಲ್ಲಿ ಇಂತಹ ಅಪರೂಪದ ಕಲೆಯನ್ನು ಕರಗತಗೊಳಿ ಸಿಕೊಂಡಿರುವ ಕಲಾವಿದರೊಬ್ಬರಿದ್ದಾರೆ. ಅವರ ಹೆಸರು ಮೋಹನ್ ವರ್ಣೇಕರ್. ಮೋಹನ್ ವರ್ಣೇಕರ್‌ರವರು ಈ ಹಿಂದೆ ಬೆಂಗಳೂರಿನ ವಿಧಾನಸೌಧದಲ್ಲಿ ಅಧಿಲೇಖನಾಧಿಕಾರಿಯಾಗಿದ್ದವರು. ನಿವೃತ್ತಿಯಾದ ಬಳಿಕ ಈಗ ಮೈಸೂರಿನಲ್ಲಿದ್ದಾರೆ.

ಇದನ್ನೂ ಓದಿ; A killer turned artist;ಈತ 20 ವರ್ಷಗಳ ಹಿಂದೆ ಕೊಲೆಗಾರ; ಜೈಲಿಂದ ಹೊರಬಂದಾಗ ಕಲೆಗಾರನಾಗಿದ್ದ!

ಅಪರೂಪದ ಕಲೆಯನ್ನು ಕರಗತ ಮಾಡಿಕೊಂಡ ಮೋಹನ್ ವರ್ಣೇಕರ್

ಕಳೆದ 40 ವರ್ಷಗಳಿಂದ ಚುಕ್ಕಿಚಿತ್ರ ಬಿಡಿಸುತ್ತಲೇ ಬಂದಿದ್ದಾರೆ. ವಿಶೇಷವೆಂದರೆ ಇದಕ್ಕೆ ಅವರು ಯಾರ ಬಳಿಯೂ ತರಬೇತಿ ಪಡೆದಿಲ್ಲ. ಅಸಲಿಗೆ ಆಗ ಇವರಿಗೆ ಚುಕ್ಕಿಚಿತ್ರ ಎಂಬ ಪ್ರಕಾರದ ಕಲಾಕೃತಿ ಇದೆ ಎಂಬುದೂ ತಿಳಿದಿರಲಿಲ್ಲ. ಹೊಸದಾಗಿ ಏನನ್ನಾದರೂ ಪ್ರಯತ್ನಿಸಬೇಕೆಂದು ಯೋಚಿಸಿದ ಮೋಹನ್ ಚುಕ್ಕಿಯಲ್ಲಿ ಚಿತ್ರ ಬಿಡಿಸುವ ಕಲೆಯನ್ನು ಅಭ್ಯಾಸ ಮಾಡುತ್ತಾ ಹೋದರು.

ಒಂದು ಚಿತ್ರ ಬರೆಯಲು ಬೇಕು 25 ಗಂಟೆ

ಇಷ್ಟು ಸುಂದರವಾಗಿ ಕಾಣುವ ಈ ಚುಕ್ಕಿಚಿತ್ರ ರಚಿಸಲು ಕನಿಷ್ಟ ಪಕ್ಷ 25 ಗಂಟೆಯಾದರೂ ಬೇಕು. ಇದರಲ್ಲಿ ಒಂದೇ ಒಂದು ಗೆರೆಯೂ ಇರುವುದಿಲ್ಲ. ಎಲ್ಲವೂ ಚುಕ್ಕಿಮಯ. ಅಷ್ಟು ಏಕಾಗ್ರತೆಯಿಂದ ಇದನ್ನು ಮಾಡಬೇಕಾದರೆ ಶ್ರದ್ಧೆಯಂತೂ ಕಡ್ಡಾಯ. ಕೆಲವೊಂದು ಚಿತ್ರಗಳನ್ನು ರಚಿಸಲು ಇವರು 60 ಗಂಟೆ ಸಮಯವನ್ನೂ ತೆಗೆದುಕೊಂಡಿದ್ದಾರಂತೆ!

ಮೊದಲು ಇವರು ರಚನೆ ಮಾಡಿದ್ದ ಮಾಸ್ತಿ ಚಿತ್ರ

ಮೋಹನ್ ವಿಶೇಷವಾಗಿ ಸಾಹಿತಿಗಳ ಚುಕ್ಕಿಚಿತ್ರ ರಚಿಸುತ್ತಾರೆ. 1974ರಲ್ಲಿ ಮೊದಲ ಬಾರಿಗೆ ಇವರು ರಚಿಸಿದ್ದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಚುಕ್ಕಿಚಿತ್ರ. ಹೀಗೆ ಕುವೆಂಪು, ಬೇಂದ್ರೆ, ಕಾರಂತ, ತ್ರಿವೇಣಿ, ಅನಕೃ, ನಟ ಡಾ.ರಾಜ್‌ಕುಮಾರ್ ಮುಂತಾದವರ ಚಿತ್ರಗಳನ್ನು ಬರೆದು ಸ್ವತಃ ಅವರ ಬಳಿಯೇ ಹೋಗಿ ಕೊಟ್ಟು ಬಂದಿದ್ದಾರೆ. ಆದರೆ, ಇವರು ಯಾವುದಕ್ಕೂ ಪ್ರತಿಫಲವನ್ನು ಬಯಸಿಲ್ಲ. ಇದನ್ನು ವೃತ್ತಿಯಾಗಿಯೂ ಮಾಡಿಕೊಂಡಿಲ್ಲ.


ಚುಕ್ಕಿ ಚಿತ್ರಕಾರನೊಳಗೊಬ್ಬ ಸಾಹಿತಿ: ಮೋಹನ್ ವರ್ಣೇಕರ್ ಸಾಹಿತಿಯೂ ಹೌದು. ಕಥಾಸಂಕಲನ, ಕಾದಂಬರಿ, ಕವನ ಸಂಕಲನ, ಮಕ್ಕಳ ಕಥೆಗಳು ಸೇರಿದಂತೆ ಈವರೆಗೂ ವಿವಿಧ ಪ್ರಕಾರಗಳ ೫೭ ಪುಸ್ತಕಗಳನ್ನು ಬರೆದಿದ್ದಾರೆ. ಅಪರಿಮಿತ ಸಾಹಿತ್ಯ ಆಸಕ್ತಿಯನ್ನೂ ಹೊಂದಿದ್ದಾರೆ. ಕನ್ನಡ ಸಾಹಿತ್ಯದ ಮೇಲೆ ಇವರಿಗಿರುವ ಆಸಕ್ತಿಯಿಂದಲೇ ಇವರು ಸಾಹಿತಿಗಳ ಚಿತ್ರ ಬರೆಯಲು ಶುರುಮಾಡಿರುವುದು.

ಇದನ್ನೂ ಓದಿ; Gandhi Statue; ವಿಧಾನಸೌಧದ ಗಾಂಧಿ ಫುಲ್‌ ಬ್ಯುಸಿ, ಎಂಜಿ ರಸ್ತೆಯ ಗಾಂಧಿ ಅನಾಥ!

ಈಗ ಸಾಹಿತಿಗಳ ಜತೆ ರಾಷ್ಟ್ರ ಕಂಡ ಅತ್ಯುತ್ತಮ ವ್ಯಕ್ತಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ, ಗಾಂಧಿ ಮುಂತಾದವರ ಚಿತ್ರಗಳನ್ನು ಬರೆಯುತ್ತಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಮೋಹನ್ ಅವರ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಹಲವಾರು ಸಂಘಟನೆ, ಸಂಸ್ಥೆಗಳ ವತಿಯಿಂದ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಅತ್ಯಂತ ವಿಶಿಷ್ಟ ಹಾಗೂ ಕಠಿಣ ಕಲಾ ಪ್ರಕಾರಗಳಲ್ಲಿ ಒಂದು ಚುಕ್ಕಿಚಿತ್ರ. ಅದನ್ನು ದಶಕಗಳಿಂದ ಮಾಡಿಕೊಂಡು ಬರುತ್ತಿರುವ ಮೋಹನ್ ವರ್ಣೇಕರ್ ಕಲಾ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವುದಂತೂ ಸತ್ಯ.

ಕೆಲ ವರ್ಷಗಳ ಹಿಂದೆ ಮೋಹನ್ ವರ್ಣೇಕರ್ ಎರಡು ಸಿಂಹಗಳ ಚುಕ್ಕಿ ಚಿತ್ರವೊಂದನ್ನು ರಚಿಸಿದ್ದಾರೆ. ಇದರಲ್ಲಿ ಬರೋಬ್ಬರಿ 2-3 ಕೋಟಿ ಚುಕ್ಕಿಗಳಿವೆಯಂತೆ. ಇದನ್ನು ರಚಿಸಲು ಅವರು ತೆಗೆದುಕೊಂಡ ಸಮಯ 60 ಗಂಟೆಗಳು. ಇದಕ್ಕೆ `ಫೆರೋಶಿಯಸ್ ಬ್ಯೂಟಿ’ (ಉಗ್ರ ಸೌಂದರ್ಯ) ಎಂಬ ಶೀರ್ಷಿಕೆಯನ್ನೂ ಇಟ್ಟಿದ್ದಾರೆ.

Share Post