ವ್ಯಕ್ತಿಯೊಬ್ಬರ ದೇಹದಲ್ಲಿ ಒಂದೂವರೆ ವರ್ಷ ಇತ್ತು ಕೊರೊನಾ..!
ಲಂಡನ್: ಕೊರೊನಾ ಬಂದರೆ ಹತ್ತರಿಂದ ಹದಿನೈದು ದಿನಗಳಲ್ಲಿ ವಾಸಿಯಾಗಿಬಿಡುತ್ತೆ. ಆದ್ರೆ, ಬ್ರಿಟನ್ನಿನಲ್ಲಿ ವ್ಯಕ್ತಿಯೊಬ್ಬರ ದೇಹದಲ್ಲಿ ಒಂದೂವರೆದ ಕಾಲದ ಕೊರೊನಾ ವೈರಾಣುಗಳು ಇದ್ದವು ಎಂಬುದನ್ನು ವಿಜ್ಞಾನಿಗಳು ತಿಳಿಸಿದ್ದಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಿದ್ದರಿಂದಾಗಿ, ಆ ವ್ಯಕ್ತಿ ದೇಹದಲ್ಲಿ ಕೊರೋನಾ ಸೋಂಕು ಒಂದೂವರೆ ವರ್ಷದ ಕಾಲ ಇತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಬ್ರಿಟನ್‌ನ ವ್ಯಕ್ತಿ ದೇಹದಲ್ಲಿ ಬರೋಬ್ಬರಿ 505 ದಿನಗಳ ಕಾಲ ಸೋಂಕು ಇತ್ತು ಎಂದು ತಿಳಿದುಬಂದಿದೆ. ಇದು ಈವರೆಗೆ ವರದಿಯಾದ ಅತ್ಯಂತ ದೀರ್ಘ ಕೋವಿಡ್ ಸೋಂಕು ಎಂದು ಗೈಸ್ ಮತ್ತು ಸೇಂಟ್ ಥಾಮಸ್ ಎನ್‌ಎಚ್‌ಎಸ್ ಫೌಂಡೇಶನ್ ಟ್ರಸ್ಟ್‌ನ ಸಾಂಕ್ರಾಮಿಕ ರೋಗ ತಜ್ಞ ಡಾ.ಲ್ಯೂಕ್ ಬ್ಲಾಗ್ಡನ್ ಸ್ನೆಲ್ ವಿವರಿಸಿದ್ದಾರೆ. ವಾರಾಂತ್ಯದಲ್ಲಿ ಪೋರ್ಚುಗಲ್‌ನಲ್ಲಿ ನಡೆಯಲಿರುವ ಸಾಂಕ್ರಾಮಿಕ ರೋಗಗಳ ಸಭೆಯಲ್ಲಿ ತಜ್ಞರ ತಂಡ ಈ ದೀರ್ಘಕಾಲದ ಕೋವಿಡ್ ಪ್ರಕರಣಗಳನ್ನು ಪ್ರಸ್ತುತಪಡಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ದೀರ್ಘಾವಧಿಯ ಸೋಂಕು ಇರುವ ಜನರಲ್ಲಿ ಯಾವ ರೂಪಾಂತರಗಳು ಉದ್ಭವಿಸುತ್ತವೆ ಮತ್ತು ರೂಪಾಂತರಗಳು ವಿಕಸನಗೊಳ್ಳುತ್ತವೆಯೇ ಎಂದು ತಂಡ ತನಿಖೆ ಮಾಡಿದೆ. ಕನಿಷ್ಠ ಎಂಟು ವಾರಗಳವರೆಗೆ ಕೋವಿಡ್ ಪಾಸಿಟಿವ್ ಆಗಿದ್ದ ಒಂಬತ್ತು ರೋಗಿಗಳನ್ನು ಈ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಎಲ್ಲ ರೋಗಿಗಳು ಅಂಗಾಂಗ ಕಸಿ, ಎಚ್ಐವಿ, ಕ್ಯಾನ್ಸರ್ ಅಥವಾ ಇತರ ಕಾಯಿಲೆಗಳಿಗೆ ಚಿಕಿತ್ಸೆಯಿಂದ ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದರು ಎಂದು ತಿಳಿದುಬಂದಿದೆ.