HealthInternational

ಯುಎಸ್‌, ಫ್ರಾನ್ಸ್‌ನಲ್ಲಿ ಕೊರೊನಾ, ಓಮಿಕ್ರಾನ್‌ ಅಬ್ಬರ: ಜನ ತತ್ತರ

ಅಮೆರಿಕಾ: ಕೊರೊನಾ, ಓಮಿಕ್ರಾನ್‌ ಪ್ರಕರಂಗಳು ಮೊದಲು ಮತ್ತು ಎರಡನೇ ಅಲೆಗಿಂತ ಬಹಳ ತೀವ್ರವಾಗಿ ಹರಡುತ್ತಿವೆ. ಒಂದು ದಿನಕ್ಕೆ ಫ್ರಾನ್ಸ್‌ ಮತ್ತು ಅಮೆರಿಕಾದಲ್ಲಿ ಲಕ್ಷಗಟ್ಟಲೆ ಪ್ರಕರಣಗಳು ದಾಖಲಾಗುತ್ತಿವೆ. ಈ ರೀತಿಯ ಬೆಳವಣಿಗೆ ಎರಡೂ ದೇಶಗಳ ಜನರಲ್ಲಿ ಭಯದ ವಾತಾವರಣ ಹುಟ್ಟುಹಾಕಿದೆ. ಅಮೆರಿಕಾದಲ್ಲಿ ನಿನ್ನೆ ಒಂದೇ ದಿನಕ್ಕೆ 3,80,751 ಪ್ರಕರಣಗಳು ವರದಿಯಾಗಿವೆ. ಅಲ್ಲದೇ ಪ್ರಕರಣದ ಸರಾಸರಿಯು 2,66,430ಕ್ಕೆ ತಲುಪಿರುವುದಾಗಿ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯವು ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ನ್ಯೂಯಾರ್ಕ್ ಸೇರಿದಂತೆ ಅಮೇರಿಕಾದ ಹಲವೆಡೆ ಬೆಡ್ ಸಿಗದೆ ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಹೀಗಿರುವಾಗ ಫ್ರಾನ್ಸ್‌ನಲ್ಲಿ ಕೂಡ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 208,000 ಪ್ರಕರಣಗಳು ವರದಿಯಾಗಿದ್ದು, ಇದು ರಾಷ್ಟ್ರೀಯ ಮತ್ತು ಯುರೋಪ್ ರಾಷ್ಟ್ರಗಳಲ್ಲೇ ದಾಖಲೆ ಅಂಕಿ ಅಂಶ ಎಂದು ಆರೋಗ್ಯ ಸಚಿವ ಒಲಿವಿಯರ್ ವೆರಾನ್ ತಿಳಿಸಿದ್ರು. ಫ್ರಾನ್ಸ್​​ನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಏರಿಕೆಯಾಗುತ್ತಿದ್ದು, ಫ್ರಾನ್ಸ್​​ನ ಜನಸಂಖ್ಯೆಗೆ ಹೋಲಿಸಿದರೆ ಪ್ರಕರಣಗಳ ಏರಿಕೆ ಪ್ರಮಾಣ ತೀವ್ರ ಆತಂಕಕಾರಿಯಾಗಿದೆ ಎಂದು ಆರೋಗ್ಯ ಸಚಿವ ವೆರಾನ್ ಹೇಳಿದ್ದಾರೆ. ‘‘ದಿನದ 24 ಗಂಟೆಯಲ್ಲಿ ಪ್ರತಿ ಸೆಕೆಂಡಿಗೆ, ಇಬ್ಬರು ನಾಗರಿಕರು ಕೋವಿಡ್​ಗೆ ತುತ್ತಾಗುತ್ತಿದ್ದಾರೆ’’ ಎಂದಿದ್ದಾರೆ. ಇಂತಹ ಪರಿಸ್ಥಿತಿಯನ್ನು ಹಿಂದೆಂದೂ ನೋಡಿರಲಿಲ್ಲ ಎಂದು ವೆರಾನ್‌ ತಿಳಿಸಿದ್ದಾರೆ. ಈ ನಡುವೆ ಇಟಲಿ, ಸ್ಪೇನ್, ಪೋರ್ಚುಗಲ್, ಗ್ರೀಸ್, ಸೈಪ್ರಸ್ ಮತ್ತು ಮಾಲ್ಟಾಗಳಲ್ಲೂ ಕೊರೊನಾ ಏರಿಕೆ ಪ್ರಮಾಣ ಹೆಚ್ಚಾಗುತ್ತಿವೆ. ಇನ್ನು ಚೀನಾದಲ್ಲಿ ಈಗಾಗಲೇ ಲಾಕ್‌ಡೌನ್‌ ಘೋಷಣೆ ಮಾಡಲಾಗಿದ್ದು, ಅಗತ್ಯ ವಸುಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ವೈರಸ್‌ ಹರಡುತ್ತಿರವ ವೇಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಆತಂಕ ಹೊರಹಾಕಿದೆ.

Share Post