ಕ್ಲೀನ್ ಶೇವ್ ಮಾಡಿದ್ರೆ ಆಫೀಸಿನಿಂದ ಗೇಟ್ ಪಾಸ್: ತಾಲಿಬಾನ್ ಸರ್ಕಾರದ ಹೊಸ ನಿಯಮ
ಕಾಬೂಲ್: ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡು, ಸರ್ಕಾರ ರಚನೆಯಾದ ನಂತರ ನಾವು ಬದಲಾಗಿದ್ದೇವೆ ಎಂದು ಅಬ್ಬರದಿಂದ ಹೇಳುತ್ತಿರುವ ತಾಲಿಬಾನ್ ನಾನಾ ಹೊಸ ನಿಯಮಗಳನ್ನು ಜಾರಿಗೊಳಿಸಿ ಜನರಿಗೆ ತೊಂದರೆ ನೀಡುತ್ತಿದೆ. ತಾಲಿಬಾನ್‌ನ ಮಾರ್ಕ್ಸ್‌ವಾದಿ ಆಡಳಿತವು ಸರ್ಕಾರಿ ನೌಕರರಿಗೆ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಅದೇನೆಂದರೆ, ‘ಸರ್ಕಾರಿ ನೌಕರರು ಗಡ್ಡವಿಲ್ಲದೆ ಕಚೇರಿಗೆ ಬರಬಾರದು ಮತ್ತು ಈ ನಿಯಮ ಉಲ್ಲಂಘಿಸಿ ಗಡ್ಡವಿಲ್ಲದೆ ಕಚೇರಿಗೆ ಬಂದರೆ ಕೆಲಸದಿಂದ ವಜಾ ಮಾಡಲಾಗುವುದು’ ಎಂಬ ನಿಯಮ ಹೇರಿದ್ದಾರೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ತಾಲಿಬಾನ್‌ಗಳು ತಪಾಸಣೆ ನಡೆಸಿ, ಈ ಸಂದರ್ಭದಲ್ಲಿ ಯಾವುದೇ ಸರ್ಕಾರಿ ನೌಕರರು ಗಡ್ಡ ಬೋಳಿಸಿಕೊಳ್ಳಬಾರದು ಎಂಬ ಹುಕುಂ ಹೊರಡಿಸಲಾಯಿತು. ಇದಲ್ಲದೆ, ಎಲ್ಲಾ ಉದ್ಯೋಗಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು. ತಾಲಿಬಾನ್‌ಗಳು ಈಗಾಗಲೇ ಹೆಣ್ಣುಮಕ್ಕಳ ಶಿಕ್ಷಣವನ್ನು ರದ್ದುಗೊಳಿಸಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಪುರುಷರು ಗಡ್ಡ ಬಿಡದೆ ಕರ್ತವ್ಯಕ್ಕೆ ಬರಬಾರದು ಎಂಬ ಹೊಸ ನಿಯಮ ಜಾರಿಗೆ ತರಲಾಗಿದೆ. ಪುರುಷರು ಸರ್ಕಾರಿ ನೌಕರರಾಗಿದ್ದರೂ ಗಡ್ಡವನ್ನು ಹೊಂದಿರಬೇಕು ಎಂದು ತಾಲಿಬಾನ್ ಹೇಳಿದ್ದಾರೆ. ಉದ್ದವಾದ, ಸಡಿಲವಾದ ಟಾಪ್, ಪ್ಯಾಂಟ್, ಟೋಪಿ ಅಥವಾ ಪೇಟದೊಂದಿಗೆ ಸ್ಥಳೀಯ ಉಡುಗೆಯನ್ನು ಧರಿಸಲು ಸಹ ಆದೇಶಿಸಲಾಗಿದೆ.
ರಾಜಧಾನಿ ಕಾಬೂಲ್‌ನಲ್ಲಿರುವ ಅನೇಕ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ಗಡ್ಡ ಬೋಳಿಸಿಕೊಳ್ಳಬೇಡಿ ಜೊತೆಗೆ ಸಾಂಪ್ರದಾಯಿಕ ಉಡುಗೆಯನ್ನೇ ಧರಿಸಬೇಕೆಂದು ಹುಕುಂ ಹೊರಡಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ತಾಲಿಬಾನ್‌ಗಳು ಪುರುಷರು ಮತ್ತು ಮಹಿಳೆಯರು ಒಟ್ಟಾಗಿ ಉದ್ಯಾನವನಗಳಿಗೆ ಹೋಗಬಾರದು ಎಂಬ ನಿಯಮವನ್ನು ಹೊರಡಿಸಿದ್ದಾರೆ.ಮಹಿಳೆಯರು ವಾರದಲ್ಲಿ ಮೂರು ದಿನ, ಮತ್ತು ಪುರುಷರು ವಾರದಲ್ಲಿ ನಾಲ್ಕು ದಿನ ಪಾರ್ಕ್‌ಗಳಿಗೆ ಹೋಗಬೇಕೆಂದು ಸೂಚನೆ ನೀಡಿದ್ದಾರೆ.