18ರ ಯುವತಿ ಜೊತೆ 49ರ ಸಂಸದನ ಮೂರನೇ ಮದುವೆ
ಇಸ್ಲಾಮಾಬಾದ್: ಪಾಕಿಸ್ತಾನದ ಟಿವಿ ವಾಹಿನಿಯೊಂದರ ನಿರೂಪಕ ಹಾಗೂ ಪಾಕಿಸ್ತಾನದ 49 ವರ್ಷದ ಸಂಸದರೊಬ್ಬರು 18 ವರ್ಷದ ಯುವತಿಯನ್ನು ಮೂರನೇ ಮದುವೆಯಾಗಿದ್ದಾರೆ. ಎರಡನೇ ಹೆಂಡತಿಗೆ ವಿಚ್ಛೇದನ ನೀಡಿದ ದಿನವೇ 18 ವರ್ಷದ ಯುವತಿಯನ್ನು ವರಿಸಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.
ಪಾಕಿಸ್ತಾನದ ಸಂಸದ ಅಮೀರ್ ಲಿಯಾಖತ್ ಹುಸೇನ್ ಅವರೇ 18 ವರ್ಷದ ಯವತಿಯನ್ನು ಮದುವೆಯಾಗಿರುವ ಸಂಸದ. ಇವರು ಆಡಳಿತಾರೂಢ ಪಕ್ಷದ ಸಂಸದರಾಗಿದ್ದು, ಇವರು ಎರಡು ದಿನದ ಹಿಂದೆಯಷ್ಟೇ ತನ್ನ ಎರಡನೇ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ಎರಡನೇ ಪತ್ನಿಯಿಂದ 15 ತಿಂಗಳಿಂದ ದೂರವೇ ಇದ್ದ ಸಂಸದ ಅಮೀರ್, ಬುಧವಾರ ವಿಚ್ಛೇದನ ಸಿಗುತ್ತಿದ್ದಂತೆ ಮೂರನೇ ಮದುವೆಯಾಗಿದ್ದಾರೆ. ಬುಧವಾರ ರಾತ್ರಿಯೇ 18 ವರ್ಷದ ಸಯೀದಾ ಎಂಬಾಕೆಯನ್ನು ಅಮೀರ್ ವರಿಸಿದ್ದಾರೆ.
ಮಗಳ ವಯಸ್ಸಿನ ಯುವತಿಯನ್ನು ಮದುವೆಯಾಗಿದ್ದಕ್ಕೆ ಸಂಸದ ಅಮೀರ್ ಟ್ರೋಲ್‌ಗೆ ಒಳಗಾಗಿದ್ದಾರೆ. ಹಣಬಲದಿಂದಾಗಿ ಯುವತಿಯನ್ನು ಒಲಿಸಿಕೊಂಡು ಮದುವೆಯಾಗಿರುವುದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.