ಅನಧಿಕೃತ ವಾಕಿ-ಟಾಕಿ ಬಳಕೆ; ಆಂಗ್ ಸಾನ್ ಸೂಕಿಗೆ ನಾಲ್ಕು ವರ್ಷ ಜೈಲು ಶಿಕ್ಷೆ
ಬ್ಯಾಂಕಾಕ್: ಅನಧಿಕೃತವಾಗಿ ವಾಕಿ-ಟಾಕಿ ಬಳಕೆ ಸೇರದಂತೆ ಹಲವು ಆರೋಪ ಎದುರಿಸುತ್ತಿರುವ ಮ್ಯಾನ್ಮಾರ್ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ಅಲ್ಲಿನ ಕೋರ್ಟ್ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಮ್ಯಾನ್ಮಾರ್ನಲ್ಲಿ ಸೇನಾ ದಂಗೆಯಾಗಿತ್ತು. ಈ ವೇಳೆ ಮ್ಯಾನ್ಮಾರ್ ನಾಯಕಿಯಾಗಿದ್ದ ಆಂಗ್ ಸಾನ್ ಸೂಕಿ ಅವರನ್ನು ಬಂಧಿಸಲಾಗಿತ್ತು. ಅಂದಿನಿಂದ ಅವರನ್ನು ಜೈಲಿನಲ್ಲಿಡಲಾಗಿತ್ತು. ಸೂಕಿ ಅವರ ಮೇಲೆ ಹನ್ನೆರಡಕ್ಕೂ ಹೆಚ್ಚು ಕೇಸ್ಗಳನ್ನು ದಾಖಲಿಸಲಾಗಿದ್ದು, ಇಂದು ಒಂದು ಕೇಸ್ನಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಆಂಗ್ ಸಾನ್ ಸೂಕಿ ಅವರು ನೊಬೆಲ್ ಪ್ರಶಸ್ತಿ ಪಡೆದಿರುವ ನಾಯಕಿ. ಅವರನ್ನು ಮ್ಯಾನ್ಮಾರ್ ಸೇನೆ ಬಂಧಿಸಿದೆ. ಅವರ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿದೆ. ಭಾರಿ ಶಿಕ್ಷೆ ನೀಡಲಾಗುವ ಸುಮಾರು ಹನ್ನೆರಡು ಪ್ರಕರಣಗಳನ್ನು ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಸೂಕಿ ಅವರಿಗೆ ಎಲ್ಲಾ ಕೇಸ್ಗಳಲ್ಲೂ ಶಿಕ್ಷೆಯಾದರೆ ಜೀವನಪರ್ಯಂತ ಅವರು ಜೈಲಿನಲ್ಲೇ ಕಳೆಯಬೇಕಾದ ಭೀತಿ ಇದೆ. ಯಾಕೆಂದರೆ ಮ್ಯಾನ್ಮಾರ್ನಲ್ಲಿ ಕಠಿಣ ಕಾನೂನಿನ ಪ್ರಕಾರ ಸೂಕಿ ವಿರುದ್ಧ ದಾಖಲಾಗಿರುವ ಎಲ್ಲಾ ಆರೋಪಗಳು ಸಾಬೀತಾದರೆ ಅವರಿಗೆ ಗರಿಷ್ಠ ನೂರು ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.