CinemaInternational

ಮೆಲ್ಬರ್ನ್‌ನಲ್ಲಿ 13ನೇ ಭಾರತೀಯ ಚಲನಚಿತ್ರೋತ್ಸವಕ್ಕೆ ಚಾಲನೆ

ಮೆಲ್ಬರ್ನ್‌; ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಭಾರತೀಯ ಚಲನಚಿತ್ರೋತ್ಸವಕ್ಕೆ ಚಾಲನೆ ದೊರೆತಿದೆ. ಇದು 13ನೇ ವರ್ಷದ ಚಲನಚಿತ್ರೋತ್ಸವವಾಗಿದ್ದು, ಭಾರತೀಯ ಚಿತ್ರರಂಗದ ಖ್ಯಾತ ತಾರೆಯರ ಸಮಾಗಮದಲ್ಲಿ ಚಾಲನೆ ನೀಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳ ಆನ್‌ಲೈನ್‌ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯ ಚಲನಚಿತ್ರೋತ್ಸವಕ್ಕೆ ಹೆಚ್ಚು ಮೆರುಗು ಬಂದಿದೆ.

ಇಂದಿನಿಂದ ಆಗಸ್ಟ್ 20 ರವರೆಗೆ ಭಾರತೀಯ ಚಿತ್ರೋತ್ಸವ ನಡೆಯಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್‌ ಖ್ಯಾತರಾದ ಅಭಿಷೇಕ್ ಬಚ್ಚನ್, ತಾಪ್ಸಿ ಪನ್ನು, ವಾಣಿ ಕಪೂರ್, ತಮನ್ನಾ ಭಾಟಿಯಾ, ಶೆಫಾಲಿ ಶಾ, ಗಾಯಕಿ ಸೋನಾ ಮಹಾಪಾತ್ರ ಮತ್ತು ಚಲನಚಿತ್ರ ನಿರ್ಮಾಪಕರಾದ ಅನುರಾಗ್ ಕಶ್ಯಪ್, ಕಬೀರ್ ಖಾನ್, ಅಪರ್ಣಾ ಸೇನ್, ನಿಖಿಲ್ ಅಡ್ವಾಣಿ ಮತ್ತು ಸುಜಿತ್ ಸಿರ್ಕಾರ್ ಮುಂತಾದವರು ಭಾಗವಹಿಸಿದ್ದಾರೆ.

ತಾಪ್ಸಿ ಪನ್ನು ಅವರ ‘ದೋಬಾರಾ’ ಚಿತ್ರದ ಪ್ರದರ್ಶನದೊಂದಿಗೆ ಈ ವರ್ಷದ ಚಿತ್ರೋತ್ಸವ ಆರಂಭವಾಗಲಿದೆ. 120 ಕ್ಕೂ ಅಧಿಕ ಚಲನಚಿತ್ರಗಳ ಪ್ರದರ್ಶನದ ಹೊರತಾಗಿ ಸ್ವಾತಂತ್ರ್ಯ ದಿನಾಚರಣೆ, ವಿಶೇಷ ಚರ್ಚಾ ಕಾರ್ಯಕ್ರಮಗಳೂ ನಡೆಯಲಿವೆ. ‘ಅಂತೂ ನಾನು ಮೆಲ್ಬರ್ನ್‌ಗೆ ಬಂದಿದ್ದೇನೆ. ಈ ನಗರವನ್ನು ನಾನು ತುಂಬಾ ಪ್ರೀತಿಸುತ್ತೇನೆ. ‘ದೋಬಾರಾ’ಚಿತ್ರವನ್ನು ವೀಕ್ಷಿಸಲು ಉತ್ಸುಕನಾಗಿದ್ದೇನೆ. ನನ್ನ ಬಹುತೇಕ ಇಡೀ ಕುಟುಂಬ ಇಲ್ಲಿ ಭಾರತವನ್ನು ಪ್ರತಿನಿಧಿಸಿದೆ ಮತ್ತು ನಾನು ಅದರ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ನಾನು ಎಲ್ಲಾ ಆಚರಣೆಗಳ ಭಾಗವಾಗಲು ಇಷ್ಟಪಡುತ್ತೇನೆ. ನನ್ನನ್ನು ಈ ಕಾರ್ಯಕ್ರಮದ ಭಾಗವಾಹಿಸಿದ್ದಕ್ಕಾಗಿ ಸರ್ಕಾರ ಮತ್ತು ಆಯೋಜಕರಿಗೆ ಧನ್ಯವಾದ ಹೇಳುತ್ತೇನೆ’ ಎಂದು ಅಭಿಷೇಕ್ ಬಚ್ಚನ್ ಹೇಳಿದರು.

Share Post