ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಣಗೆ ಆರಂಭದಲ್ಲೇ ಕ್ರಮ; ಡಾ.ಕೆ.ಸುಧಾಕರ್
ಬೆಂಗಳೂರು; ಅಪೌಷ್ಟಿಕತೆ ಹಾಗೂ ಅನೀಮಿಯಾ ನಿವಾರಣೆಗಾಗಿ ಆರಂಭಿಕ ಹಂತದಲ್ಲೇ ಮಕ್ಕಳ ಆರೋಗ್ಯ ತಪಾಸಣೆ ಮಾಡುವುದು ಮುಖ್ಯ. ಇದಕ್ಕಾಗಿ ಗ್ರಾಮೀಣ ಭಾಗಗಳಲ್ಲಿ ಶಾಲೆ ಸೇರಿದಂತೆ ಮಕ್ಕಳಿರುವ ಜಾಗಗಳಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ, ಅಪೌಷ್ಟಿಕತೆ ಮತ್ತು ಅನಿಮೀಯ ಮುಕ್ತ ಕರ್ನಾಟಕ ಕುರಿತ ಕಾರ್ಯಾಗಾರದಲ್ಲಿ ಸಚಿವರು ಮಾತನಾಡಿದರು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಒಟ್ಟುಗೂಡಿಸಿ ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ನಮ್ಮ ಇಲಾಖೆಯಿಂದ ತಪಾಸಣೆ ನಡೆಸಿ ಗುರಿಗಳನ್ನು ಮುಟ್ಟಿರುವುದನ್ನು ತೋರಿಸುತ್ತೇವೆ. ಆದರೆ ಈ ಬಗ್ಗೆ ನಿಜವಾಗಿಯೂ ಆತ್ಮಾವಲೋಕ ಮಾಡಿಕೊಂಡರೆ ನಾವು ಸಂಪೂರ್ಣವಾಗಿ ತಪಾಸಣೆ ನಡೆಸುತ್ತಿಲ್ಲ ಎಂದೇ ಹೇಳಬೇಕು. ಪಿಎಚ್‌ಸಿ ವ್ಯಾಪ್ತಿಯಲ್ಲಿ ವೈದ್ಯರು ಶಾಲೆಗಳಿಗೆ ಹೋಗುವುದು ಅಥವಾ ಮಕ್ಕಳೇ ಪಿಎಚ್‌ಸಿ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಶಿಕ್ಷಣ ಇಲಾಖೆಯಿಂದ ಗಂಭೀರ ಕ್ರಮ ವಹಿಸಬೇಕು ಎಂದರು.
ಇಂದಿನ ಕಾಲದಲ್ಲೂ ಮಾತೃ ಮರಣವಾಗುತ್ತಿರುವುದು ಅತ್ಯಂತ ಅಪಮಾನದ ಸಂಗತಿ. ರಾಜ್ಯದ ಪ್ರತಿ ಮಹಿಳೆಯರು ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆಗೆ ಮುಂದೆ ಬರುವಂತಾಗಬೇಕು. ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುವುದು ಒಂದು ಪರಂಪರೆಯ ರೂಢಿಯಾಗಿ ಬೆಳೆದುಬಂದಿದೆ. ಇದೇ ರೀತಿ ರಾಜ್ಯದಲ್ಲಿ ಮಹಿಳೆಯರು, ತಾಯಂದಿರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದನ್ನು ಪರಂಪರೆಯಂತೆ ಬೆಳೆಸಬೇಕು. ಇದಕ್ಕಾಗಿ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು ಎಂದರು.