ಫಾರ್ಮ್‌ಹೌಸ್‌ನಲ್ಲಿ ವನ್ಯಜೀವಿಗಳ ಸಾಕಾಣೆ; ನಿರೀಕ್ಷಣಾ ಜಾಮೀನು ಕೋರಿದ ಎಸ್‌ಎಸ್ ಮಲ್ಲಿಕಾರ್ಜುನ್
ದಾವಣಗೆರೆ; ದಾವಣಗೆರೆಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಅವರಿಗೆ ಬಂಧನದ ಭೀತಿ ಶುರುವಾಗಿದೆ. ಹೀಗಾಗಿ ಅವರು ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಸಿಸಿಬಿ ಪೊಲೀಸರು ದಾವಣಗೆರೆ ಅವರ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದಾಗ ಜಿಂಕೆ, ಕಾಡು ಹಂದಿ ಸೇರಿ ಹಲವು ಕಾಡು ಪ್ರಾಣಿಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಲಾಗಿದ್ದು, ಮಲ್ಲಿಕಾರ್ಜುನ್ ಸೇರಿ ಹಲವರಿಗೆ ಬಂಧನದ ಭೀತಿ ಎದುರಾಗಿದೆ. ಎಲ್ಲರೂ ತಲೆ ಮರೆಸಿಕೊಂಡಿದ್ದಾರೆ.
ಡಿಸೆಂಬರ್ 21 ರಂದುಕಲ್ಲೇಶ್ವರ ಮಿಲ್ ಹಿಂಭಾಗವಿರುವ ಫಾರ್ಮ್ ಹೌಸ್ ಮೇಲೆ ಸಿಸಿಬಿ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಎಂಟಕ್ಕೂ ಹೆಚ್ಚು ಜಿಂಕೆ, ಕಾಡು ಹಂದಿಗಳು ಪತ್ತೆಯಾಗಿದ್ದವು. ಅವುಗಳನ್ನು ಪರವಾನಿಗೆ ಪಡೆಯದೇ ಸಾಕಣೆ ಮಾಡಲಾಗುತ್ತಿತ್ತು. ಇದೀಗ ಆ ವನ್ಯಜೀವಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸುಪರ್ದಿಗೆ ಪಡೆದುಕೊಂಡಿದ್ದಾರೆ.
ಫಾರ್ಮ್ ಹೌಸ್‌ನ ಮ್ಯಾನೇಜರ್, ಜಾಗದ ಮಾಲೀಕ ಮಲ್ಲಿಕಾರ್ಜುನ್ ಸೇರಿದಂತೆ 4 ಜನರ ಮೇಲೆ ಕೇಸ್ ದಾಖಲಿಸಲಾಗಿದೆ. ಆರೋಪಿಗಳೆಲ್ಲರೂ ನಾಪತ್ತೆಯಾಗಿದ್ದಾರೆ. ಜಾಗದ ಮಾಲೀಕ ಮಾಜಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಕೂಡಾ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಈ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಜನವರಿ 2 ಕ್ಕೆ ಮುಂದೂಡಿಕೆ ಮಾಡಿದ್ದಾರೆ.