ಈದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣ; ಈವರೆಗೆ 24 FIR ದಾಖಲು – ಮಧು ಬಂಗಾರಪ್ಪ
ಶಿವಮೊಗ್ಗ; ಭಾನುವಾರ ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ಎರಡು ಗುಂಪುಗಳು ಕಲ್ಲು ತೂರಾಟ ನಡೆಸಿದ್ದವು. ಇದ್ರಿಂದ ರಾಗುಗುಡ್ಡ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಪರಿಸ್ಥಿತಿ ತಿಳಿಯಾಗಿದೆ. ಪೊಲೀಸರು ಈ ಭಾಗದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಇನ್ನು ಉಸ್ತುವಾರಿ ಸಚಿವ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಜನರಿಂದ ಮಾಹಿತಿ ಪಡೆದಿದ್ದಾರೆ.
ಇದೇ ವೇಳೆ ಮಾತನಾಡಿರುವ ಮಧು ಬಂಗಾರಪ್ಪ ಅವರು, ಈ ಪ್ರಕರಣ ಸಂಬಂಧ ಇದುವರೆಗೆ ಪೊಲೀಸರು 24 FIR ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಗಲಾಟೆ ದೊಡ್ಡದಾಗುವ ಮೊದಲೇ ಪೊಲೀಸರು ನಿಯಂತ್ರಿಸಿದ್ದಾರೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಬಿಡೋದಿಲ್ಲ. ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ, ಎಲ್ಲರಿಗೂ ಒಂದೇ ರೀತಿಯಲ್ಲಿ ಶಿಕ್ಷೆ ಆಗುತ್ತದೆ ಎಂದು ಬಂಧು ಬಂಗಾರಪ್ಪ ತಿಳಿಸಿದ್ದಾರೆ.
ಇನ್ನು ಅನಗತ್ಯವಾಗಿ ನಮ್ಮ ಮಕ್ಕಳನ್ನು ಬಂಧಿಸಿದ್ದಾರೆ ಎಂದು ರಾಗಿಗುಡ್ಡದ ಮುಸ್ಲಿಂ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಹಿಂದೂ-ಮುಸ್ಲಿಂ ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಾವೂ ಗಣೇಶ ಹಬ್ಬವನ್ನು ಒಟ್ಟಾಗಿ ಆಚರಣೆ ಮಾಡುತ್ತೇವೆ. ಆದ್ರೆ ಮೊನ್ನೆ ಯಾರು ಕಲ್ಲು ತೂರಿದ್ದಾರೋ ಅವರಿಗೆ ಶಿಕ್ಷೆಯಾಗಲೀ. ಆದ್ರೆ ವಿಚಾರ ದೊಡ್ಡದಾಗುತ್ತಿದ್ದಂತೆ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ. ನಮ್ಮ ಮಕ್ಕಳನ್ನು ಬಂಧಿಸಿದ್ದಾರೆ ಎಂದು ಗೋಳು ತೋಡಿಕೊಂಡಿದ್ದಾರೆ.