ತುಳುನಾಡಿನ ಜನಪ್ರಿಯ ಕ್ರೀಡೆ ಕಂಬಳಕ್ಕೆ ಅದ್ದೂರಿ ಚಾಲನೆ
ಉಡುಪಿ; ತುಳುನಾಡಿನ ಜನಪ್ರಿಯ ಕ್ರೀಡೆ ಕಂಬಳ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ರಾಜ ಮನೆತನದ ಸಂಪ್ರದಾಯದಂತೆ ವೈಭವದ ಪ್ರಾರಂಭ ಕಂಡಿತು. ಕಟಪಾಡಿ ಬೀಡು ಮೂಡು-ಪಡು ಜೋಡುಕರೆ ಕಂಬಳಕ್ಕೆ ಕಟಪಾಡಿ ಬೀಡುವಿನ ಹಿರಿಯರು ಇಂದು ಚಾಲನೆ ನೀಡಿದರು.
ಉಡುಪಿ ಜಿಲ್ಲೆಯ ಕಟಪಾಡಿ ಮೂಡು ಪಡು ಕಂಬಳಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ. ಅರಸು ಮನೆತನದವರಿಂದ ಕಟಪಾಡಿ ಕಂಬಳ ಆರಂಭವಾದದ್ದು. ನಂತರದ ದಿನಗಳಲ್ಲಿ ಮೂಡು ಪಡು ಕಂಬಳ ಹೊಸ ಆಯಾಮಗಳನ್ನು ಪಡೆದಿದೆ. ಸದ್ಯ ಹೊನಲು ಬೆಳಕಿನಲ್ಲಿ ಕಂಬಳವನ್ನು ಆಯೋಜಿಸಲಾಗುತ್ತಿದ್ದು ಸಾವಿರಾರು ಮಂದಿ ಪಾಲ್ಗೊಳ್ಳುತ್ತಾರೆ. ಇಲ್ಲಿನ ದೈವಗಳಿಗೆ ಮೊದಲ ಸೇವೆ ನಡೆದ ನಂತರ ಕೋಣಗಳು ಗದ್ದೆಗೆ ಇಳಿಯುವುದು ಸಂಪ್ರದಾಯ. ಇಂದಿಗೂ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಕ್ರೀಡೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.
ಇತ್ತೀಚಿನ ಕೆಲ ವರ್ಷಗಳಲ್ಲಿ ನ್ಯಾಯಾಲಯದಲ್ಲಿ ಹಲವು ಬಾರಿ ನಿಷೇಧದ ಆತಂಕಕ್ಕೊಳಗಾಗಿ ಇಂದು ಷರತ್ತು ಬದ್ಧ ಕಂಬಳ ನಡೆಯುತ್ತಿದೆ. ತುಳುನಾಡಿನಲ್ಲಿ ಕೆಲವೆಡೆ ಕಂಬಳ ಪ್ರತಿಷ್ಠೆಯ ಕ್ರೀಡೆಯಾಗಿ ನಡೆಯಲ್ಪಡುತ್ತಿದ್ದರೆ, ಇನ್ನು ಕೆಲವೆಡೆ ದೈವರ ಹೆಸರಿನಲ್ಲಿ ಆರಾಧನಾ ಕ್ರೀಡೆಯಾಗಿ ನಡೆಯುತ್ತಿದೆ. ಈ ಕಾರಣದಿಂದ ಕಂಬಳ ಕ್ರೀಡೆಗೆ ನಿಷೇಧ ಹೇರಿದಾಗ ಧಾರ್ಮಿಕವಾಗಿ ತೊಂದರೆ ಉಂಟಾಗಿತ್ತು. ಕರಾವಳಿಯ ಹೆಚ್ಚಿನ ಅರಸು ಮನೆತನಗಳಲ್ಲಿ ಕೃಷಿ ಚಟುವಟಿಕೆಯ ಬಳಿಕ ಕಂಬಳ ಸಂಪ್ರದಾಯವಾಗಿ ನಡೆದುಬಂದಿದೆ.
ಜಿಲ್ಲೆಯ ಕಟಪಾಡಿ ಎಂಬ ಪ್ರದೇಶ ತುಳುನಾಡಿನ ಇತಿಹಾಸದಲ್ಲಿ, ಜಾನಪದ ಕತೆಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ಕೋಟಿ ಚೆನ್ನಯ, ಕಾಂತಾಬಾರೆ ಬೂದಬಾರೆ, ಬಬ್ಬುಸ್ವಾಮಿ ಮುಂತಾದ ದೈವಾಂಶ ಸಂಭೂತರ ಕತೆಗಳಲ್ಲಿ ಕಟಪಾಡಿ ಬೀಡು ಒಂದಲ್ಲ ಒಂದು ಕಾರಣದಿಂದ ಉಲ್ಲೇಖಗೊಂಡಿದೆ. ಈ ಕಾರಣದಿಂದ ಕಟಪಾಡಿಯ ಕಂಬಳಕ್ಕೆ 3 ಜಿಲ್ಲೆಗಳಿಂದ ಜನ ಬರುತ್ತಾರೆ.
ಕೃಷಿ, ಧಾರ್ಮಿಕತೆ ಮತ್ತು ಜಾನಪದ ಈ ಮೂರು ವಿಷಯಗಳೊಂದಿಗೆ ಕಂಬಳ ಕ್ರೀಡೆ ಸೇರಿಕೊಂಡಿದೆ.ಈ ಕಾರಣದಿಂದ ಕಂಬಳ ಕ್ರೀಡೆ ನಿಲ್ಲದಂತೆ ಇಲ್ಲಿನ ಜನ ಹೋರಾಡುತ್ತಿದ್ದಾರೆ. ಸದ್ಯ ನಿಷೇಧ ತೆರವಿನ ಬಳಿಕ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳ ನಿರಾತಂಕವಾಗಿ ನಡೆಯುತ್ತಿರುವುದು ಕಂಬಳ ಪ್ರೇಮಿಗಳಿಗೆ ಸಂತಸ ತಂದಿದೆ.