ಈ ಸುಂದರನಿಗೆ ಹೆಣ್ಣೇ ಸಿಗಲಿಲ್ಲವಂತೆ..! ; ದಾರಿ ಕಾಣದೆ ಆತ್ಮಹತ್ಯೆ
ಕಾರವಾರ; ಮೂವತ್ತೈದು ವರ್ಷವಾದರೂ ಮದುವೆಯಾಗಲು ಹೆಣ್ಣು ಸಿಗದಿದ್ದರಿಂದ ಬೇಸತ್ತು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಈ ದುರ್ಘಟನೆ ನಡೆದಿದ್ದು, ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ನಾಗರಾಜ ಗಣಪತಿ ಗಾಂವ್ಕರ್ ಎಂದು ಗುರುತಿಸಲಾಗಿದೆ.
ಯಲ್ಲಾಪುರದ ತೇಲಂಗಾರ ಕಿರಗಾರಿಮನೆ ನಿವಾಸಿಯಾಗಿದ್ದ ನಾಗರಾಜ ಗಣಪತಿ ಗಾಂವ್ಕರ್ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದ. ಆದ್ರೆ ಕೃಷಿ ಕೆಲಸ ಮಾಡುತ್ತಿದ್ದರಿಂದ ಯಾರೂ ಆತನಿಗೆ ಹೆಣ್ಣು ಕೊಡುತ್ತಿರಲಿಲ್ಲ. ಸಂಬಂಧಿಕರು, ಬ್ರೋಕರ್‌ಗಳ ಮೂಲಕವೂ ಹೆಣ್ಣು ಹುಡುಕಾಟ ನಡೆದಿತ್ತು. ಆದ್ರೆ ಎಲ್ಲಿಯೂ ಹೆಣ್ಣು ಸಿಕ್ಕಿರಲಿಲ್ಲ. ಇದರಿಂದ ಚಿಂತೆಗೀಡಾಗಿ ನಾಗರಾಜ್ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಹೀಗಾಗಿ ಆತ್ಮಹತ್ಯೆಗೆ ನಿರ್ಧಾರ ಮಾಡಿರುವ ನಾಗರಾಜ್, ಮನೆಯ ಸಮೀಪದ ಗುಡ್ಡಕ್ಕೆ ತೆರಳಿ, ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸು ದಾಖಲಾಗಿದೆ. ವ್ಯವಸಾಯ ಮಾಡುವ ವರರಿಗೆ ಹೆಣ್ಣು ಸಿಗುತ್ತಿಲ್ಲ ಎಂದು ಮಂಡ್ಯ ಹುಡುಗರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.